ಜನರ ಹಣದಿಂದ ರಾಜನಿಗೆ ಕಾಣಿಕೆ ನೀಡುತ್ತಿರುವ ಹೊಗಳುಭಟರು: ಪಿಎಂ ಕೇರ್ಸ್ ವಿರುದ್ಧ ಮಹುವಾ ಮೊಯಿತ್ರ ವಾಗ್ದಾಳಿ

Update: 2020-09-20 15:03 GMT

ಹೊಸದಿಲ್ಲಿ,ಸೆ.20: ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರು ಶನಿವಾರ ಲೋಕಸಭೆಯಲ್ಲಿ ಪಿಎಂ ಕೇರ್ಸ್ ನಿಧಿಯ ವಿರುದ್ಧ ತೀವ್ರ ದಾಳಿ ನಡೆಸಿದರಲ್ಲದೆ, ಅದು ಜಿಎಸ್‌ಟಿ ವ್ಯವಸ್ಥೆಯಡಿ ನೀಡಲಾದ ಶಾಸನಬದ್ಧ ಭರವಸೆಗಳನ್ನು ಕಿತ್ತುಕೊಳ್ಳುತ್ತಿದೆ ಮತ್ತು ಸಾರ್ವಜನಿಕ ರಂಗದ ಹಣವನ್ನು ಸಂಗ್ರಹಿಸುವ ಮೂಲಕ ರಾಜ್ಯ ಪರಿಹಾರ ನಿಧಿಗಳನ್ನು ದುರ್ಬಲಗೊಳಿಸುತ್ತದೆ ಎಂದು ಪ್ರತಿಪಾದಿಸಿದರು.

ಪಿಎಂ ಕೇರ್ಸ್ ನಿಧಿಗೆ ದೇಣಿಗೆ ಸಲ್ಲಿಸಲು ಪೈಪೋಟಿಗೆ ಬಿದ್ದಿರುವ ಸಾರ್ವಜನಿಕ ಕ್ಷೇತ್ರದ ಉದ್ಯಮ (ಪಿಎಸ್‌ಯು)ಗಳನ್ನು ಸಾರ್ವಜನಿಕರ ಹಣದಿಂದ ರಾಜನಿಗೆ ಕಾಣಿಕೆಗಳನ್ನು ನೀಡಲು ಪೈಪೋಟಿ ನಡೆಸುವ ಹೊಗಳುಭಟ ಆಸ್ಥಾನಿಕರಿಗೆ ಹೋಲಿಸಿದ ಮೊಯಿತ್ರಾ, ಚೀನಾದ ಕಂಪನಿಗಳಿಂದ ದೇಣಿಗೆಗಳನ್ನು ಸ್ವೀಕರಿಸುತ್ತಿರುವುದಕ್ಕಾಗಿ ಸರಕಾರವನ್ನು ತರಾಟೆಗೆತ್ತಿಕೊಂಡರು. ಮರಣಶಯ್ಯೆಯಲ್ಲಿರುವ ಯಾವುದೇ ಭಾರತೀಯ ಶತ್ರು ರಾಷ್ಟ್ರದ ಹಣದಿಂದ ಖರೀದಿಸಿರುವ ವೆಂಟಿಲೇಟರ್‌ನಲ್ಲಿರಲು ಬಯಸುವುದಿಲ್ಲ ಎಂದು ಹೇಳಿದರು.

ತೆರಿಗೆ ಮತ್ತು ಇತರ ಕಾನೂನುಗಳು (ಸಡಿಲಿಕೆ ಮತ್ತು ಕೆಲವು ನಿಯಮಗಳ ತಿದ್ದುಪಡಿ) ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯಗಳಿಗೆ ಜಿಎಸ್‌ಟಿ ಪಾಲನ್ನು ಪಾವತಿಸುವ ತನ್ನ ಹೊಣೆಗಾರಿಕೆಯಿಂದ ಕೇಂದ್ರವು ನುಣುಚಿಕೊಳ್ಳುವಂತಿಲ್ಲ. ಅದು ಸಾಲ ಮಾಡಿಯಾದರೂ 2.35 ಕೋ.ರೂ.ಗಳನ್ನು ಪಾವತಿಸಲೇಬೇಕು ಎಂದರು.

  ಪಿಎಂ ಕೇರ್ಸ್ ನಿಧಿ ಮತ್ತು ರಾಜ್ಯ ಪರಿಹಾರ ನಿಧಿಗಳಿಗೆ ದೇಣಿಗೆಗಳು ಒಂದೇ ವಿಧವಾಗಿದ್ದರೂ ಅವುಗಳನ್ನು ವಿಭಿನ್ನವಾಗಿ ಪರಿಗಣಿಸುತ್ತಿರುವುದು ಸಾರ್ವಜನಿಕ ಹಿತಾಸಕ್ತಿ, ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ ಮತ್ತು ರಾಜ್ಯ ನಿಧಿಗಳಿಗೆ ಕಾರ್ಪೊರೇಟ್ ದೇಣಿಗೆಗಳನ್ನು ಅನುತ್ತೇಜಿಸುತ್ತಿದೆ. ಶುಕ್ರವಾರ ಸದನದಲ್ಲಿ ಮಸೂದೆಯನ್ನು ಮಂಡಿಸಿದ್ದ ಸಚಿವರು ತಮ್ಮ ಉಳಿತಾಯದ ಸಣ್ಣ ಮೊತ್ತಗಳನ್ನು ಪಿಎಂ ಕೇರ್ಸ್ ನಿಧಿಗೆ ದೇಣಿಗೆಯನ್ನಾಗಿ ನೀಡಿದ ಶಾಲಾಮಕ್ಕಳು ಮತ್ತು ಪಿಂಚಣಿದಾರರ ಉದ್ದಪಟ್ಟಿಯನ್ನೇ ಓದಿದ್ದಾರೆ, ಆದರೆ ನಿಧಿಗೆ 2,100 ಕೋ.ರೂ.ಗಿಂತ ಹೆಚ್ಚಿನ ದೇಣಿಗೆಗಳನ್ನು ನೀಡಿರುವ 38 ಪಿಎಸ್‌ಯುಗಳ ಬಗ್ಗೆ ಅವರು ಮೌನ ವಹಿಸಿದ್ದು ಅಚ್ಚರಿಯನ್ನು ಮೂಡಿಸಿದೆ. ನಿಧಿಯ ಶೇ.70ಕ್ಕೂ ಅಧಿಕ ಹಣ ಈ ಪಿಎಸ್‌ಯುಗಳಿಂದಲೇ ಬಂದಿದೆ. ಈ ಪಿಎಸ್‌ಯುಗಳು ಸಾರ್ವಜನಿಕ ಹಣದಿಂದ ದೇಣಿಗೆಗಳನ್ನು ನೀಡುತ್ತಿವೆ. ಇದಕ್ಕೆ ಯಾವುದೇ ಆಡಿಟ್ ಕೂಡ ಇಲ್ಲ, ಹಿತಾಸಕ್ತಿಗಳ ಸಂಘರ್ಷ ಢಾಳಾಗಿ ಎದ್ದು ಕಾಣುತ್ತಿದೆ ಎಂದು ಮೊಯಿತ್ರಾ ಹೇಳಿದರು.

ನಿಧಿಯು ಸರಕಾರಿ ಸಂಸ್ಥೆಯ ಸೋಗಿನಲ್ಲಿ ದೇಣಿಗೆಗಳನ್ನು ಸಂಗ್ರಹಿಸುತ್ತಿದೆ. ಪಿಎಂ ನಿಧಿ ಎಂಬ ಹೆಸರೇ ಜನರು ಇದು ಸರಕಾರಿ ವ್ಯವಸ್ಥೆ ಎಂದು ಭಾವಿಸುವಂತೆ ಮಾಡುತ್ತಿದೆ. ಈ ನಿಧಿಯು ಆರ್‌ಟಿಐ ವ್ಯಾಪ್ತಿಯಲ್ಲಿಲ್ಲ ಎಂದು ಹೇಳುವ ಮೂಲಕ ನೀವು (ಸರಕಾರ) ಸದಾ ಧ್ಯಾನಿಸುತ್ತಿರುವ ಪಾರದರ್ಶಕತೆಯಿಂದ ನುಣುಚಿಕೊಳ್ಳುತ್ತಿದ್ದೀರಿ ಎಂದು ಮೊಯಿತ್ರಾ ಚಾಟಿ ಬೀಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News