ಸಮುದ್ರ ಮಧ್ಯೆ ಎರಡು ಬೋಟು ಅವಘಡ: 11 ಮೀನುಗಾರರ ರಕ್ಷಣೆ

Update: 2020-09-20 16:57 GMT

 ಮಲ್ಪೆ, ಸೆ.20: ಭಾರೀ ಮಳೆಯ ಪರಿಣಾಮ ತಾಂತ್ರಿಕ ಸಮಸ್ಯೆಯಿಂದ ಎರಡು ಬೋಟುಗಳು ಇಂದು ಸಮುದ್ರ ಮಧ್ಯೆ ಅವಘಡಕ್ಕೀಡಾಗಿದ್ದು, 11 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಅದೇ ರೀತಿ ಹೊಳೆಯಲ್ಲಿ ಲಂಗಾರು ಹಾಕಿದ ನಾಲ್ಕು ದೋಣಿಗಳು ಪ್ರವಾಹದಿಂದ ನೀರಿನಲ್ಲಿ ಮುಳುಗಿ ಕೋಟ್ಯಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಮಲ್ಪೆ ಬಂದರಿನಲ್ಲಿ ಲಂಗಾರು ಹಾಕಿದ್ದ ರಾಮ ಕುಂದರ್ ಎಂಬವರ ಮಾಲಕತ್ವದ ಶ್ರೀಶೈಲಜಾ ಹೆಸರಿನ ಬೋಟು ನೀರಿನ ರಭಸಕ್ಕೆ ಹಗ್ಗ ತುಂಡಾಗಿ ಸಮುದ್ರದಲ್ಲಿ ತೇಲಿ ಹೋಗಿದ್ದು, ತಾಂತ್ರಿಕ ತೊಂದರೆಯಿಂದ ಬೋಟು ಚಾಲನೆ ಆಗದೆ ಅಲೆಯ ಅಬ್ಬರಕ್ಕೆ ತೇಲಿ ಸೈಂಟ್ ಮೇರಿಸ್ ದ್ವೀಪದ ಬಳಿಯ ಬಂಡೆಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಕೂಡಲೇ ಸ್ಥಳೀಯ ಮೀನುಗಾರರು ಕರಾವಳಿ ಪಡೆಯ ಪೊಲೀಸರ ಸಹಕಾರ ದೊಂದಿಗೆ ಸ್ಥಳಕ್ಕೆ ತೆರಳಿ ಮುಳುಗುತ್ತಿದ್ದ ಬೋಟಿನಲ್ಲಿದ್ದ ಐವರು ಮೀನುಗಾರ ರನ್ನು ರಕ್ಷಿಸಿದ್ದಾರೆ. ಅವಘಡದಿಂದ ನೀರು ನುಗ್ಗಿ ಬೋಟು ಸಮುದ್ರ ಮಧ್ಯೆ ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ.

ಅದೇ ರೀತಿ ಮೀನುಗಾರಿಕೆ ಮುಗಿಸಿ ಬಂದರಿಗೆ ವಾಪಾಸ್ಸು ಬರುತ್ತಿದ್ದ ಲೀಲಾವತಿ ಸಾಲ್ಯಾನ್ ಎಂಬವರ ಮಾಲಕತ್ವದ ಜಲ ಸಂಪತ್ತು ಹೆಸರಿನ ಬೋಟಿನ ಸ್ಟೇರಿಂಗ್ ರಾಡ್ ಸಮುದ್ರ ಮಧ್ಯೆ ತುಂಡಾಗಿತ್ತೆನ್ನಲಾಗಿದೆ. ಬೋಟು ಮುಂದಕ್ಕೆ ಚಲಿಸದೆ ಸಮುದ್ರ ಮಧ್ಯೆ ನಿಂತಿದ್ದು, ಬಳಿಕ ಕಾರವಳಿ ಕಾವಲು ಪಡೆಯ ಪೊಲೀಸರು ಹಾಗೂ ಸ್ಥಳೀಯರು ತೆರಳಿ ಅದರಲ್ಲಿದ್ದ ಆರು ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ಎಳೆದು ತರಲು ಆಗದೆ ಬೋಟು ಸಮುದ್ರ ಮಧ್ಯೆಯೇ ಉಳಿದುಕೊಂಡಿದೆ.

ಮಲ್ಪೆ ಬಂದರಿನ ಸಾಹುಕಾರ್ ಬಾರ್ ಬಳಿಯ ಹೊಳೆಯಲ್ಲಿ ಲಂಗಾರು ಹಾಕಿದ್ದ ನಾಲ್ಕು ದೋಣಿಗಳು, ಪ್ರವಾಹದಿಂದಾಗಿ ಹೊಳೆಯಲ್ಲಿ ಕೊಚ್ಚಿ ಕೊಂಡು ಹೋಗಿ ನೀರಿನಲ್ಲಿ ಮುಳುಗಿತ್ತೆಂದು ತಿಳಿದುಬಂದಿದೆ. ಇದರಿಂದ ದೋಣಿಯ ಇಂಜಿನ್, ಬಲೆ ಸೇರಿದಂತೆ ಸುಮಾರು ಒಂದು ಕೋಟಿ ರೂ. ವೌಲ್ಯದ ಸೊತ್ತು ಗಳು ನಷ್ಟ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News