ಮಹಾಮಳೆಗೆ ಉಡುಪಿ ನಗರ ತತ್ತರ: ಹಲವು ಮನೆ ಅಂಗಡಿಗಳಿಗೆ ಹಾನಿ

Update: 2020-09-20 16:58 GMT

ಉಡುಪಿ, ಸೆ.20: ನಗರದಲ್ಲಿ ಸತತವಾಗಿ ಸುರಿದ ದಶಕದ ಮಹಾಮಳೆಗೆ ಉಡುಪಿ ನಗರ ತತ್ತರಿಸಿ ಹೋಗಿದ್ದು, ಹಲವು ಮನೆಗಳು, ಅಂಗಡಿಗಳು ಜಲಾ ವೃತಗೊಂಡಿವೆ.

ಕಲ್ಸಂಕ ತೋಡಿನಲ್ಲಿ ಇಂದ್ರಾಣಿ ನದಿ ಉಕ್ಕಿದ ಹರಿದ ಪರಿಣಾಮ ಬೈಲಕೆರೆ, ಶ್ರೀಕೃಷ್ಣ ಮಠದ ರಾಜಾಂಗಣ ಹಿಂಬದಿಯ ಪಾರ್ಕಿಂಗ್ ಪ್ರದೇಶ, ಗೀತಾಂಜಲಿ ಮಾರ್ಗ, ಬಡಗುಪೇಟೆ, ಮಠದ ಬೆಟ್ಟು, ಬನ್ನಂಜೆ ಗರಡಿ ರಸ್ತೆಗಳಲ್ಲಿರುವ ಮನೆ ಹಾಗೂ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದ ಬಡಗುಪೇಟೆಯಲ್ಲಿ ಅಂಗಡಿ, ಮುಗ್ಗಟ್ಟುಗಳಲ್ಲಿದ್ದ ಸಾಮಾಗ್ರಿಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಕಲ್ಸಂಕ ಸುತ್ತಮುತ್ತಲಿನ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿ ಯಾಗಿದೆ. ಮಧ್ಯಾಹ್ನದವರೆಗೆ ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಬದಿಯ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೈಲಕೆರೆ, ಮಠದಬೆಟ್ಟು, ಮಣ್ಣುಪಳ್ಳ, ಕಲ್ಸಂಕ, ಗುಂಡಿಬೈಲು ಸೇರಿದಂತೆ ವಿವಿಧ ಪ್ರದೇಶದ ನೂರಾರು ಮಂದಿಯನ್ನು ದೋಣಿ, ತೆಪ್ಪ, ಟ್ಯೂಬ್‌ಗಳಲ್ಲಿ ರಕ್ಷಣೆ ಮಾಡಲಾಯಿತು. ಕೆಲವು ಕಡೆ ಅಗತ್ಯ ಬಿದ್ದಲ್ಲಿ ಕ್ರೇನ್ ಬಳಕೆ ಮಾಡಿ ಜನರನ್ನು ರಕ್ಷಿಸಲಾಯಿತು.

ಬಡಗುಪೇಟೆ, ಗೀತಾಂಜಲಿ ಮಾರ್ಗ, ಮಠ ಪಾರ್ಕಿಂಗ್ ಪ್ರದೇಶ, ಮಥುರಾ ಛತ್ರ, ರಸ್ತೆ ಬದಿಗಳಲ್ಲಿ ಹಾಗೂ ಮನೆಗಳ ಆವರಣದಲ್ಲಿ ನಿಲ್ಲಿಸ ಲಾಗಿದ್ದ 25ಕ್ಕೂ ಅಧಿಕ ಕಾರು ಹಾಗೂ ಇತರ ವಾಹನ ಗಳು ನೆರೆಯ ನೀರಿನಲ್ಲಿ ಭಾಗಶಃ ಮುಳುಗಡೆಯಾಗಿದೆ. ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಬೆಂಗಳೂರು, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಂದ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ಧ ಭಕ್ತರು ತೊಂದರೆ ಅನುಭವಿಸಿದರು.

ಪ್ರವಾಹದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಕಲ್ಸಂಕ ಸೇರಿದಂತೆ ಹಲವು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀ ಲನೆ ನಡೆಸಿದರು. ಅದೇ ರೀತಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಕೂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.

ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ 105 ವಿದ್ಯುತ್ ಕಂಬಗಳು, ಐದು ಟ್ರಾನ್ಸ್ ಫಾರ್ಮರ್‌ಗಳು, 3.1ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ಹಾನಿ ಯಾಗಿ ಸುಮಾರು 12ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಸೂಕ್ತ ಸಮಯಕ್ಕೆ ಸಹಾಯ ದೊರೆಯದೆ ಪರದಾಡಿದ ಸಂತ್ರಸ್ತರು!

ರೆಡ್ ಅರ್ಲಟ್ ಘೋಷಣೆಯಾಗಿದ್ದರೂ ಜಿಲ್ಲಾಡಳಿತ ಯಾವುದೇ ಪೂರ್ವ ಸಿದ್ಧತೆ ನಡೆಸದ ಪರಿಣಾಮ ಪ್ರವಾಹ ಪೀಡಿತ ಪ್ರದೇಶ ನೂರಾರು ಮಂದಿ ಸಕಾಲಕ್ಕೆ ಸಹಾಯ ದೊರಕದೆ ಪರದಾಡುತ್ತಿರುವುದು ಕಂಡುಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜನಪ್ರತಿ ನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಸುಕಿನ ವೇಳೆ ಮನೆಯೊಳಗೆ ನೀರು ನುಗ್ಗಿದ್ದರೂ ಆತಂಕದ ಸ್ಥಿತಿಯಲ್ಲಿದ್ದ ವೃದ್ಧರು, ಅನಾರೋಗ್ಯ ಪೀಡಿತರು, ಮಹಿಳೆಯರನ್ನು ಮಧ್ಯಾಹ್ನ ದವರೆಗೆ ರಕ್ಷಣೆ ಮಾಡುವ ಕಾರ್ಯ ಕೆಲವು ಕಡೆಗಳಲ್ಲಿ ನಡೆದಿಲ್ಲ. ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರೇ ಟ್ಯೂಬ್ ಬಳಕೆ ಮಾಡಿ ತಮ್ಮ ಗ್ರಾಮದ ಮನೆಮಂದಿಯನ್ನು ಸ್ಥಳಾಂತರಿಸುವ ಕೆಲಸ ಮಾಡಿದರು.

ಪ್ರವಾಹದ ಸಮಯದಲ್ಲಿ ಸಹಾಯವಾಣಿಗೆ ಕರೆ ಮಾಡಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ನೂರಾರು ಮನೆಗಳು ಜಲಾವೃತಗೊಂಡರೂ ಸರಿಯಾದ ಸಮಯಕ್ಕೆ ರಕ್ಷಣಾ ಕಾರ್ಯ ನಡೆದಿಲ್ಲ. ಇದರಿಂದ ಸಂತ್ರಸ್ತರು ಗಂಟೆಗಟ್ಟಲೆ ಮನೆಯೊಳಗೆ ಇರಬೇಕಾಯಿತು ಎಂದು ಬನ್ನಂಜೆ ಗರಡಿ ರಸ್ತೆಯ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News