ಕರಾವಳಿಯಾದ್ಯಂತ ಧಾರಾಕಾರ ಮಳೆ : ಬಂಟ್ವಾಳದಲ್ಲಿ ಆರು ಮಂದಿಗೆ ಗಾಯ

Update: 2020-09-20 17:22 GMT

ಬಂಟ್ವಾಳ, ಸೆ.20: ಕೆಲವು ದಿನಗಳಿಂದ ಕರಾವಳಿಯಾದ್ಯಂತ ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ಮಂಗಳಪದವು ಸಮೀಪದ ಬನಾರಿ  ಬಾಬುಕಟ್ಟೆ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ಆರು ಮಂದಿ ಗಾಯಗೊಂಡಿದ್ದು ಅಲ್ಲದೆ ವಿವಿಧೆಡೆ ಮನೆಗಳಿಗೆ ಹಾನಿ, ತಡೆಗೋಡೆ ಕುಸಿತ, ರಸ್ತೆ, ಸೇತುವೆಗೆ ಹಾನಿ, ಮಳೆ ನೀರು ನುಗ್ಗಿ ಕೃಷಿ ಹಾನಿಗೊಂಡಿರುವ ಘಟನೆಯೂ ಸಂಭವಿಸಿವೆ. 

ಬಾಬುಕಟ್ಟೆಯ ತರಕಾರಿ ವ್ಯಾಪಾರಿ ಅಬ್ದುಲ್ಲ ಎಂಬವರ ಮನೆಯ ಪಕ್ಕದ ಧರೆ ಜೋರಾದ ಮಳೆಗೆ ಕುಸಿದು ಮನೆ ಮೇಲೆ ಉರುಳಿ ಬಿದ್ದಿದೆ. ಇದರಿಂದ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಪರಿಣಾಮ ಮನೆಯಲ್ಲಿದ್ದ ಆರು ಮಂದಿ ಗಾಯಗೊಂಡಿದ್ದಾರೆ. 

ಘಟನೆಯಲ್ಲಿ ಕುಟುಂಬದ ಆರು ಮಂದಿ ಮನೆಯ ಅವಷೇದಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಸ್ಥಳೀಯರು ಆರು ಮಂದಿಯನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮನೆ ಯಜಮಾನ ಅಬ್ದುಲ್ಲ, ಪತ್ನಿ ಜೋಹಾರ, ಮಕ್ಕಳಾದ ಅರಫಾಝ್, ಇರ್ಪಾನ್, ತಸ್ಲೀಮಾ, ಮಿಶ್ರಿಯಾ ಗಾಯಗೊಂಡಿದ್ದು, ವಿಟ್ಲ ಹಾಗೂ ತುಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. 

ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಬಂಟ್ವಾಳ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಣ್ಣು ಸವೆಯುತ್ತಿರುವ ಆತಂಕ ಉಂಟಾಗಿದ್ದು, ಹಲವು ಕಡೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ.

ತಾಲೂಕಿನ ಪುಣಚ ಗ್ರಾಮದ ಮಲೆತಡ್ಕ ಎಂಬಲ್ಲಿ ಮಳೆಯಿಂದಾಗಿ ಮೊದಲೇ ಹದಗೆಟ್ಟಿದ್ದ ಸೇತುವೆಯ ಪಕ್ಕದ ಮಣ್ಣು ಕುಸಿದಿದ್ದು ಸೇತುವೆಯೂ ಕುಸಿತದ ಭೀತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಪುಣಚದಿಂದ ಸಾರಡ್ಕ ಸಂಪರ್ಕಿಸುವ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಈ ಸೇತುವೆ ಕೇರಳ ಕರ್ನಾಟಕವನ್ನು ಸಂಪರ್ಕಿಸುತ್ತದೆ. ಈ ಹಿನ್ನೆಲೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲು ಇಲಾಖೆ ಸೂಚಿಸಿದ್ದು, ವಿಟ್ಲ ಪೊಲೀಸರು ಅಪಾಯಸೂಚಕ ಪಟ್ಟಿ ಕಟ್ಟಿ, ಬ್ಯಾರಿಕೇಡ್‌ಗಳನ್ನು ಅಳವಡಿಸಿ ರಸ್ತೆಯನ್ನು ಎರಡೂ ಭಾಗಗಳಿಂದ ಮುಚ್ಚಿದ್ದಾರೆ.

ಸಜೀಪ ಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿ ಅಮೀನಾ ಎಂಬವರ ಮನೆಯ ಒಂದು ಪಾರ್ಶ್ವ ಕುಸಿದಿದ್ದು, ಮನೆಗೆ ಹಾನಿಯಾಗಿದೆ. ಮನೆಮಂದಿಯನ್ನು ಮತ್ತೊಂದು ಮನೆಗೆ ಸ್ಥಳಾಂತರಿಸಲಾಗಿದ್ದು, ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾಲೆತ್ತೂರು ಕಟ್ಟೆ ಮಸೀದಿ ಬಳಿ ರಸ್ತೆಬದಿ ಗುಡ್ಡ ಕುಸಿತದಿಂದಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಲೋಕೋಪಯೋಗಿ ಇಲಾಖೆ ಯಿಂದ ಮಣ್ಣು ತೆರವು ಕಾರ್ಯಾಚರಣೆ ನಡೆದು, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅಲ್ಲದೆ ಬಿ.ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ಎರಡು ಮನೆಗಳ ನಡುವಿನ ಬರೆ ಜರಿದಿದೆ.

ಕುಳ ಗ್ರಾಮದ ಮುದಲೆಗುಂಡಿ ಎಂಬಲ್ಲಿ ಗೋಪಾಲ ಭಟ್ಟ ಎಂಬುವರ ಅಡಿಕೆ ತೋಟಕ್ಕೆ ಮಳೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ. ಇದಲ್ಲದೆ ಬಿ.ಸಿ.ರೋಡ್ ಹಾಸನ ಹೆದ್ದಾರಿಯ ಇಕ್ಕೆಲಗಳಲ್ಲೂ ಇದ್ದ ಮಣ್ಣು ರಸ್ತೆಗೆ ಹರಡಿದ ಕಾರಣ, ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಯಿತು. ಕೃಷಿ ಕಾರ್ಯಗಳಿಗೆ ತೊಡಕಾಗಿದೆ. ಕೆಲವೆಡೆ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ.

ನೇತ್ರಾವತಿ ನದಿಯ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು ಅಪಾಯದ ಮಟ್ಟ 8.5 ಮೀಟರ್ ಗೆ ಒಂದೂವರೆ ಮೀಟರ್ ಅಷ್ಟೇ ಕಡಿಮೆ ಇದೆ. ರವಿವಾರ ಬೆಳಗ್ಗೆ ನೀರಿನ ಮಟ್ಟ 7.2 ಮೀಟರ್ ಎತ್ತರ ವಿತ್ತು. ಸಂಜೆ ವೇಳೆ 6.9 ಮೀಟರ್ ಇತ್ತು. ತುಂಬೆಯಲ್ಲಿ ಸಂಜೆ ವೇಳೆ ನೀರಿನ ಮಟ್ಟ 5.6 ಮೀಟರ್ ಎತ್ತರವಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News