ಸಿಎಸ್‌ಕೆ ನಾಯಕನಾಗಿ 100ನೇ ಗೆಲುವು ದಾಖಲಿಸಿದ ಧೋನಿ

Update: 2020-09-20 17:54 GMT

ಅಬುಧಾಬಿ, ಸೆ.20: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ)ಸ್ಟಾರ್ ಆಟಗಾರ ಎಂ.ಎಸ್. ಧೋನಿ ಶನಿವಾರ ತನ್ನ ಫ್ರಾಂಚೈಸ್‌ನ ನಾಯಕನಾಗಿ 100ನೇ ಗೆಲುವು ದಾಖಲಿಸುವುದರೊಂದಿಗೆ ಕ್ರಿಕೆಟ್‌ಗೆ ಸ್ಮರಣೀಯ ಪುನರಾರಂಭ ಮಾಡಿದ್ದಾರೆ. ಸಿಎಸ್‌ಕೆ ಶನಿವಾರ ನಡೆದ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದೆ. ಧೋನಿ ಐಪಿಎಲ್‌ನಲ್ಲಿ 100 ಗೆಲುವು ದಾಖಲಿಸಿರುವ ಮೊದಲ ನಾಯಕನಾಗಿ ಹೊರಹೊಮ್ಮಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ನಡೆದಿದ್ದ 50 ಓವರ್‌ಗಳ ವಿಶ್ವಕಪ್ ಟೂರ್ನಮೆಂಟ್‌ನ ಸೆಮಿ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಕೊನೆಯ ಬಾರಿ ಕಾಣಿಸಿಕೊಂಡಿರುವ ಧೋನಿ 437 ದಿನಗಳ ಬಳಿಕ ಕ್ರಿಕೆಟ್ ಮೈದಾನಕ್ಕೆ ವಾಪಸಾಗಿದ್ದಾರೆ. ಭಾರತದ ಮಾಜಿ ನಾಯಕ ಆಗಸ್ಟ್ 15 ರಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ‘‘ನಾವು ಸಾಕಷ್ಟು ಅಭ್ಯಾಸ ನಡೆಸಿದ್ದೆವು. ಆದರೆ, ನಾವು ಮೈದಾನಕ್ಕೆ ಹೋದಾಗ, ಪರಿಸ್ಥಿತಿಯನ್ನು ಪರಿಶೀಲಿಸುವ ಅಗತ್ಯವಿರುತ್ತದೆ. ಇದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಈ ಪಿಚ್‌ನಲ್ಲಿ ಸರಿಯಾದ ಲೆಂಗ್ತ್ ಪಡೆಯಲು ಬೌಲರ್‌ಗಳಿಗೆ ಸಮಯ ತೆಗೆದುಕೊಳ್ಳುತ್ತದೆ. ಮೊದಲ ಪಂದ್ಯದಲ್ಲಿ ಸಾಕಷ್ಟು ಧನಾತ್ಮಕ ಅಂಶಗಳಿದ್ದರೂ, ಇನ್ನಷ್ಟು ಸುಧಾರಣೆಯಾಗಬೇಕಾಗಿದೆ’’ ಎಂದು ಪಂದ್ಯದ ಬಳಿಕ ಧೋನಿ ಹೇಳಿದ್ದಾರೆ. ಚೆನ್ನೈನ ಯಶಸ್ವಿ ರನ್ ಚೇಸಿಂಗ್ ವೇಳೆ ಧೋನಿ ಕೇವಲ 2 ಎಸೆತವನ್ನು ಎದುರಿಸಿದ್ದು, ಖಾತೆ ತೆರೆಯದೆ ಔಟಾಗದೆ ಉಳಿದರು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ತಾನೆದುರಿಸಿದ್ದ ಮೊದಲ ಎಸೆತದಲ್ಲಿ ರಿವೀವ್(ಡಿಆರ್‌ಎಸ್)ನಿಂದಾಗಿ ಔಟಾಗುವುದರಿಂದ ಬಚಾವ್ ಆದರು. ರಿಪ್ಲೇಯಲ್ಲಿ ಜಸ್‌ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಧೋನಿಯ ಬ್ಯಾಟ್ ಚೆಂಡನ್ನು ಸ್ಪರ್ಶಿಸದಿರುವುದು ಕಂಡುಬಂತು. ಹೀಗಾಗಿ ಅಂಪೈರ್ ತಮ್ಮ ತೀರ್ಪನ್ನು ಹಿಂಪಡೆದರು.

ಸಿಎಸ್‌ಕೆ ಸೆಪ್ಟಂಬರ್ 22 ರಂದು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಸೆಪ್ಟಂಬರ್ 23 ರಂದು ಮುಂಬೈ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸವಾಲು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News