ಕಲ್ಲೇಗ ಮಸೀದಿಯಲ್ಲಿ ಜಮಾಅತ್ ಡೆವಲಪ್‌ಮೆಂಟ್ ಸೆಂಟರ್ ಉದ್ಘಾಟನೆ

Update: 2020-09-21 07:12 GMT

ಪುತ್ತೂರು, ಸೆ.21: ಕಲ್ಲೇಗ ಮಸೀದಿಯಲ್ಲಿ ಆರಂಭಿಸಿದ ಜಮಾಅತ್ ಡೆವಲಪ್‌ಮೆಂಟ್ ಸೆಂಟರ್ ರವಿವಾರ ಉದ್ಘಾಟನೆಗೊಂಡಿತು.

ಜಮಾಅತ್ ಕೇಂದ್ರೀಕರಿಸಿ ಜಮಾಅತರ ಅಭಿವೃದ್ಧಿಯ ಉದ್ದೇಶದಿಂದ ಆರಂಭಿಸಲಾದ ಈ ಸೆಂಟರ್‌ನ್ನು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು ಹಾಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಹಳ ವ್ಯವಸ್ಥಿತ ಯೋಜನೆಯೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಜಮಾಅತ್ ಡೆವಲಪ್‌ಮೆಂಟ್ ಸೆಂಟರ್‌ನ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೊಂದು ಮಾದರಿ ಯೋಜನೆ ಎಂದು ಅವರು ಶ್ಲಾಘಿಸಿದರು.

ಈ ಕೇಂದ್ರದ ಅಧೀನದಲ್ಲಿ ಕಾರ್ಯಾಚರಿಸುವ ಜಮಾಅತ್ ಜನಸೇವಾ ಕೇಂದ್ರವನ್ನು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳು ನಾವು ಸಮಾಲೋಚಿಸಿ ಈ ಜಮಾಅತ್ ಡೆವಲಪ್‌ಮೆಂಟ್ ಸೆಂಟರ್ ಅಸ್ತಿತ್ವಕ್ಕೆ ತಂದಿದ್ದೇವೆ. ಇದು ಸಮುದಾಯದ ಎಲ್ಲರ ಆಲೋಚನೆಗಳನ್ನು ಒಂದೆಡೆ ಸೇರಿಸಿ ಅತ್ಯುತ್ತಮ ಆಲೋಚನೆಯನ್ನು ಆಯ್ಕೆ ಮಾಡಿ ರೂಪಿಸಿದ ಯೋಜನೆಯಾಗಿದೆ. ಬಹಳ ಸುಲಭ ಮತ್ತು ಸುಸೂತ್ರವಾಗಿ ಇದರ ಮೂಲಕ ನಮಗೆ ಕಾರ್ಯಾಚರಿಸಬಹುದು ಎಂದರು.

ಕಲ್ಲೇಗ ಜಮಾಅತ್ ಅಧ್ಯಕ್ಷ ಶಕೂರ್ ಹಾಜಿ ಮಾತನಾಡಿ, ಜಮಾಅತ್ ಡೆವಲಪ್‌ಮೆಂಟ್ ಸೆಂಟರ್ ಮೂಲಕ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸೆಂಟರ್‌ನಲ್ಲಿ ಜಮಾಅತ್ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಈಗಾಗಲೇ ನೋಂದಣಿ ಮಾಡಿದ್ದು, ಅವರ ಮಾರ್ಗದರ್ಶನಕ್ಕೆ ವೃತ್ತಿಪರ ತಂಡವನ್ನು ರಚಿಸಲಾಗಿದೆ ಎಂದರು.

ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಶಿಕ್ಷಣವು ಅರ್ಧದಲ್ಲೇ ಮೊಟಕುಗೊಳ್ಳದಂತೆ ಎಚ್ಚರಿಕೆ ವಹಿಸುವ ಜೊತೆಗೆ ಅವರನ್ನು ಪ್ರೋತ್ಸಾಹಿಸುತ್ತಾ, ಮಾರ್ಗದರ್ಶನ -ಸಹಾಯ ನೀಡುವುದರತ್ತ ಡೆವಲಪ್‌ಮೆಂಟ್ ಸೆಂಟರ್ ಗಮನಹರಿಸಲಿದೆ. ಹತ್ತು ಪ್ರಮುಖ ಕೋರ್ಸ್‌ಗಳಿಗೆ ಸಂಬಂಧಿಸಿ ಸಂಪೂರ್ಣ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸುವುದು, ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದು, ಅವರು ನೈತಿಕ ಮತ್ತು ಮೌಲ್ಯಾಧಾರಿತ ಜೀವನ ನಡೆಸಲು ಅನುಕೂಲ ಕಲ್ಪಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.

ಜಮಾಅತ್ ಡೆವಲಪ್‌ಮೆಂಟ್ ಸೆಂಟರ್‌ನ ಪ್ರಾಜೆಕ್ಟ್ ವರದಿಯನ್ನು ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿಯ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು, ಈ ಡೆವಲಪ್‌ಮೆಂಟ್ ಸೆಂಟರ್‌ನ ಕಾರ್ಯಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸೆಂಟರ್‌ನ ಉದ್ದೇಶ ಎಷ್ಟು ಕಾರ್ಯಗತಗೊಂಡಿದೆ ಎಂಬುದರ ಬಗ್ಗೆ ವಾರ್ಷಿಕ ಸಾಮಾಜಿಕ ಅವಲೋಕನ ಅಗತ್ಯ ಎಂದು ಕಿವಿಮಾತು ಹೇಳಿದರು.

ಹಿದಾಯ ಫೌಂಡೇಶನ್ ಉಪಾಧ್ಯಕ್ಷ ಆಸಿಫ್ ಡೀಲ್ಸ್ ಮಾತನಾಡಿ, ಜಮಾಅತ್ ಡೆವಲಪ್‌ಮೆಂಟ್ ಸೆಂಟರ್‌ನ ಕಾರ್ಯಯೋಜನೆ ಬಹಳ ಸರಳವಾಗಿದೆ. ಇಂತಹ ಡೆವಲಪ್‌ಮೆಂಟ್ ಸೆಂಟರ್ ಎಲ್ಲ ಮಸೀದಿಗಳಲ್ಲೂ ಅಸ್ತಿತ್ವಕ್ಕೆ ಬರಬೇಕಿದೆ ಎಂದರು.

ಎಂ.ಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಹಲವು ಪ್ರಮುಖ ಮಸೀದಿಗಳು ತಮ್ಮ ಜಮಾಅತರ ಒಳಿತಿಗಾಗಿ ಶ್ರಮಿಸುತ್ತಿದೆ. ಅವರಿಗೆ ಈ ಡೆವಲಪ್‌ಮೆಂಟ್ ಸೆಂಟರ್ ಮಾರ್ಗದರ್ಶಿ ಆಗಬಹುದು ಎಂದರು.

ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್ ಮಾತನಾಡಿದರು.

ಇದೇ ಸಂದರ್ಭ ಎನ್.ಆರ್.ಐ ಪ್ರವಾಸಿಗಳು ಕಲ್ಲೇಗ ಇದರ ಅಧ್ಯಕ್ಷ ಅಬ್ದುಲ್ಲತೀಫ್, ಅಲ್ ಅಮೀನ್ ಯಂಗ್‌ಮೆನ್ಸ್‌ನ ಅಧ್ಯಕ್ಷ ಅಬ್ದುರ್ರಶೀದ್‌ರನ್ನು ಮಾದರಿ ಜಮಾಅತ್ ಯೋಜನೆಗೆ ನೀಡಿದ ಸಹಕಾರಕ್ಕಾಗಿ ಆಸಿಫ್ ಡೀಲ್ಸ್ ಅವರು ಟೀಂ ಬಿ ಹ್ಯೂಮನ್ ಮೂಲಕ ಸನ್ಮಾನಿಸಿದರು.

ಅದೇರೀತಿ ಸಮಾಜ ಸೇವಕರಾದ ಇಮ್ತಿಯಾಝ್ ಪಾರ್ಲೆ, ಉದಯ ಹನೀಫ್ ಹಾಗೂ ತನ್ನ ಇಬ್ಬರು ಪುತ್ರಿಯರನ್ನು ವೈದ್ಯೆಯರನ್ನಾಗಿಸಿದ ಅಬ್ದುಸ್ಸಮದ್ ಅವರನ್ನು ಹಿದಾಯ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಉದ್ಯಮಿ ಅಶ್ರಫ್ ಮುಕ್ವೆ ಮುಖ್ಯ ಅತಿಥಿಯಾಗಿದ್ದರು.
ವಾಗ್ಮಿ ಅಬೂಬಕರ್ ಸಿದ್ದೀಕ್ ಜಲಾಲಿ ದುಆಗೈದರು. ಖಾಝಿ ತ್ವಾಖಾ ಅಹ್ಮದ್ ಮುಸ್ಲಿಮಾರ್‌ರ ಶುಭ ಸಂದೇಶದ ಧ್ವನಿಮುದ್ರಿಕೆಯನ್ನು ಸುನ್ನೀಟುಡೇ ಸಂಪಾದಕ ಹನೀಫ್ ಪುತ್ತೂರು ಬಿತ್ತರಿಸಿದರು. ಸಿದ್ದೀಕ್ ಅಡ್ವಕೇಟ್ ಕಾರ್ಯಕ್ರಮ ನಿರ್ವಹಿಸಿದರು. ಅಶ್ರಫ್ ಕಲ್ಲೇಗ ವಂದಿಸಿದರು.

ಜಮಾಅತ್ ಡೆವಲಪ್‌ಮೆಂಟ್ ಸೆಂಟರ್
ಜಿ.ಎ.ಬಾವಾರ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಸಂಘಸಂಸ್ಥೆಗಳ ಮುಖಂಡರು, ಉಲಮಾಗಳು, ಚಿಂತಕರು ಮತ್ತು ಪತ್ರಕರ್ತರ ಸಲಹೆ - ಸೂಚನೆ ಮತ್ತು ಮಾರ್ಗದರ್ಶನದಲ್ಲಿ ಈ ಜಮಾಅತ್ ಡೆವಲಪ್‌ಮೆಂಟ್ ಸೆಂಟರ್ ರೂಪುಗೊಂಡಿದೆ ಎಂದು ಪ್ರಕಟನೆ ತಿಳಿಸಿದೆ.

ಲಾಕ್ ಡೌನ್ ಸಂದರ್ಭದವನ್ನು ಸದುಪಯೋಗ ಪಡಿಸಿ, ಪ್ರೊಡಕ್ಟಿವ್ ಮುಸ್ಲಿಂ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಸಂಘಟಿತರಾದ ಜಿಲ್ಲೆಯ ಪ್ರಮುಖರು, ಜಮಾಇತ್ ಅಭಿವೃದ್ಧಿ ಯೋಜನೆಗೆ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಸುಮಾರು 670 ಪುಟಗಳ ಅಭಿಪ್ರಾಯ ಸಂಗ್ರಹಿಸಿ, ಅವುಗಳಲ್ಲಿ ಅತ್ಯುತ್ತಮವಾದವುಗಳನ್ನು ಕಾರ್ಯರೂಪಕ್ಕೆ ತರಲು ಕಲ್ಲೇಗ ಜಮಾಅತನ್ನು ಪೈಲೆಟ್ ಪ್ರೊಜೆಕ್ಟ್‌ಗೆ ಆಯ್ಕೆ ಮಾಡಲಾಯಿತು. ಕಲ್ಲೇಗ ಜಮಾಅತ್ ಅಧ್ಯಕ್ಷ ಶಕೂರ್ ಹಾಜಿ ನೇತೃತ್ವದ ಸಮಿತಿಯು ಯಂಗ್‌ಮೆನ್ಸ್ ಕಮಿಟಿಯ ಜೊತೆ ಸೇರಿ ನಾಲ್ಕು ತಿಂಗಳ ಅವಿರತ ಶ್ರಮದಿಂದ ಜಮಾಅತ್‌ನ ಡೆವಲಪ್‌ಮೆಂಟ್ ಸೆಂಟರ್ ಕಾರ್ಯಯೋಜನೆಗಳನ್ನು ರೂಪಿಸಿದೆ. ಪ್ರೊಡಕ್ಟಿವ್ ಮುಸ್ಲಿಂ ಆಲೋಚನಾ ಬಳಗದ ಮಾರ್ಗದರ್ಶನದಲ್ಲಿ ಬಹಳ ವ್ಯವಸ್ಥಿತವಾಗಿ ಮಾದರಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಜಮಾಅತ್ ವ್ಯಾಪ್ತಿಯ ಕುಟುಂಬಗಳ ಅಂಕಿಅಂಶಗಳನ್ನು ಕಲೆಹಾಕಿ ಜಮಾಅತರ ಸ್ಥಿತಿಗತಿಗಳನ್ನು ಅಭ್ಯಸಿಸಲಾಯಿತು. ಜಮಾಅತ್ ವ್ಯಾಪ್ತಿಯ ಎನ್.ಆರ್.ಐಗಳನ್ನು, ವೃತ್ತಿಪರರನ್ನು, ವಿದ್ಯಾರ್ಥಿಗಳನ್ನು, ಯುವಕ-ಯುವತಿಯರನ್ನು, ಆರ್ಥಿಕವಾಗಿ ಹಿಂದುಳಿದವರನ್ನು, ವೃದ್ಧ್ದರನ್ನು, ಅಸಕ್ತರನ್ನು, ಸಂಪನ್ನರನ್ನು ಗುರುತಿಸಲಾಯಿತು. ಉದ್ಯೋಗ ಮಾಹಿತಿ, ಆರ್ಥಿಕ ಸ್ಥಿತಿಗತಿ, ಸಾಲ ಮತ್ತು ಸಮಸ್ಯೆಗಳ ಪಟ್ಟಿಯನ್ನು ತಯಾರಿಸಲಾಯಿತು. ಬಳಿಕ ಮೊದಲ ಪ್ರಯತ್ನವಾಗಿ ವಿದ್ಯಾರ್ಥಿಗಳನ್ನು ಜಮಾಅತಿಗೆ ಕರೆಯಿಸಿ ಅವರ ಗುರಿಯನ್ನು ನಿಶ್ಚಯಿಸಲಾಯಿತು. ಡೆವಲಪ್ ಮೆಂಟ್ ಸೆಂಟರ್‌ನ ಕಾರ್ಯಯೋಜನೆಯಲ್ಲಿ ಅವರ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿವರಿಸಲಾಯಿತು. ಪ್ರೊಡಕ್ಟಿವ್ ಮುಸ್ಲಿಂ ಆಲೋಚನಾ ಬಳಗದ ಸೂಚನೆಯಂತೆ ಜಮಾಅತ್ ಡೆವಲಪ್‌ಮೆಂಟ್ ಸೆಂಟರ್ ತಂಡದಲ್ಲಿ ವಿದ್ಯಾರ್ಥಿಗಳನ್ನು, ವೃತ್ತಿಪರರನ್ನು, ಯುವಕರನ್ನು, ಮಹಿಳೆಯರ ವಿಭಾಗವನ್ನೂ ಸೇರಿಸಿ, ಈವೆಂಟ್ ಕ್ಯಾಲೆಂಡರ್ ಮೂಲಕ ನಡೆಸುವ 20 ಅಂಶಗಳ ಕಾರ್ಯಕ್ರಮದಲ್ಲಿ ಐದು ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಯಿತು ಎಂದು ಪ್ರಕಟನೆ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News