ಭರವಸೆ ಈಡೇರಿಸದ ಸರಕಾರ: ಕೀರ್ತಿಚಕ್ರ ಮರಳಿಸಲು ಮೃತ ಯೋಧನ ಕುಟುಂಬದ ನಿರ್ಧಾರ

Update: 2020-09-21 13:15 GMT
ಸಾಂದರ್ಭಿಕ ಚಿತ್ರ

ಶಿಮ್ಲ, ಸೆ.21: ಅಸ್ಸಾಂನಲ್ಲಿ 18 ವರ್ಷದ ಹಿಂದೆ ನಡೆದ ‘ಆಪರೇಷನ್ ಖಡ್ಗಮೃಗ’ ಹೆಸರಿನ ಕಾರ್ಯಾಚರಣೆ ಸಂದರ್ಭ ಮೃತಪಟ್ಟ ಯೋಧನಿಗೆ ಗೌರವಪೂರ್ವಕ ಮರಣೋತ್ತರ ಪ್ರದಾನ ಮಾಡಲಾಗಿದ್ದ ಕೀರ್ತಿ ಚಕ್ರವನ್ನು ಸರಕಾರಕ್ಕೆ ಮರಳಿಸಲು ಮೃತ ಯೋಧನ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಸರಕಾರ ತನ್ನ ಭರವಸೆ ಈಡೇರಿಸದೆ ನಿರ್ಲಕ್ಷ ತಳೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 18 ವರ್ಷದ ಹಿಂದೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನಿವಾಸಿ ಅನಿಲ್ ಚೌಹಾಣ್ ಭಾರತೀಯ ಸೇನೆಯಲ್ಲಿ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಮೃತಪಟ್ಟಿದ್ದರು. ಮೃತ ಯೋಧನಿಗೆ ಸೇನೆಯಲ್ಲಿ ನೀಡಲಾಗುವ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ಮರಣೋತ್ತರ ಘೋಷಿಸಲಾಗಿತ್ತು. ಅಲ್ಲದೆ ಗ್ರಾಮದ ಶಾಲೆಗೆ ಅನಿಲ್ ಕುಮಾರ್‌ನ ಹೆಸರನ್ನು ಇಡುವುದಲ್ಲದೆ, ಗ್ರಾಮದ ಪ್ರವೇಶ ದ್ವಾರದ ಬಳಿ ಅನಿಲ್ ಕುಮಾರ್ ಹೆಸರಿನಲ್ಲಿ ಗೇಟ್ ನಿರ್ಮಿಸುವುದಾಗಿ ಹಿಮಾಚಲ ಸರಕಾರ ಭರವಸೆ ನೀಡಿತ್ತು. ಆದರೆ 18 ವರ್ಷವಾದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. 

ಸೋಮವಾರ ಶಿಮ್ಲಾದ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಮೂಲಕ ಕೀರ್ತಿ ಚಕ್ರವನ್ನು ಸರಕಾರಕ್ಕೆ ಮರಳಿಸುವುದಾಗಿ ಮೃತ ಯೋಧನ ತಾಯಿ ರಾಜ್‌ಕುಮಾರಿ ಹೇಳಿದ್ದಾರೆ. ಯೋಧನ ಕುಟುಂಬದವರನ್ನು ರಾಜಭವನದ ಹೊರಗಡೆ ಭೇಟಿಯಾದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಈ ವಿಷಯ ತನಗೆ ಇತ್ತೀಚೆಗಷ್ಟೇ ತಿಳಿದು ಬಂದಿದೆ. 18 ವರ್ಷದ ಹಿಂದೆ ಸರಕಾರ ನೀಡಿದ್ದ ಭರವಸೆಯನ್ನು ತನ್ನ ಸರಕಾರ ಈಡೇರಿಸುತ್ತದೆ ಎಂದಿದ್ದಾರೆ. ತಕ್ಷಣ ತನ್ನ ಕಚೇರಿಗೆ ಬಂದು ಅಧಿಕಾರಿಗಳನ್ನು ಭೇಟಿಯಾಗುವಂತೆ ಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ ಮೊದಲು ರಾಜ್ಯಪಾಲರನ್ನು ಭೇಟಿಯಾಗುತ್ತೇವೆ ಎಂದು ರಾಜ್‌ಕುಮಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News