ದಿಲ್ಲಿ ಹಿಂಸಾಚಾರ ಆರೋಪಿಗಳಿಗೆ ಜಾಮೀನು ನಿರಾಕರಣೆ

Update: 2020-09-21 16:35 GMT

ಹೊಸದಿಲ್ಲಿ, ಸೆ.21: ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರ ಸಂದರ್ಭ ಪೊಲೀಸ್ ಕಾನ್‌ಸ್ಟೇಬಲ್ ರತನ್‌ಲಾಲ್ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳಿಗೆ ದಿಲ್ಲಿಯ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಜಾಮೀನು ಕೋರಿದ ಅಭ್ಯರ್ಥಿ ಕೈಯಲ್ಲಿ ಕತ್ತಿ, ದೊಣ್ಣೆ ಹಿಡಿದು ಯಾವ ರೀತಿ ಅಭಿವ್ಯಕ್ತಿ ಸ್ವಾತಂತ್ರವನ್ನು ಚಲಾಯಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕರ್ಕಾರ್‌ಡೂಮ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಪ್ರಶ್ನಿಸಿದ್ದಾರೆ. ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರ ಸಂದರ್ಭ ರತನ್‌ಲಾಲ್‌ರನ್ನು ಫೆಬ್ರವರಿ 24ರಂದು ಹತ್ಯೆ ಮಾಡಲಾಗಿತ್ತು. 

ಕೊಲೆ ಮಾಡಿದ ಉದ್ರಿಕ್ತ ಗುಂಪಿನಲ್ಲಿ ಮುಹಮ್ಮದ್ ಇಬ್ರಾಹಿಂ ಕತ್ತಿ ಜಳಪಿಸುತ್ತಿರುವುದು ಹಾಗೂ ಬದ್ರುಲ್ ಹಸನ್ ದೊಣ್ಣೆ ಹಿಡಿದುಕೊಂಡಿರುವುದು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಉದ್ರಿಕ್ತ ಗುಂಪು ಪೊಲೀಸ್ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳಿಗೆ ನಿಷ್ಕರುಣೆಯಿಂದ ಥಳಿಸಿರುವುದಕ್ಕೆ ಪುರಾವೆಯಿದೆ ಎಂದು ನ್ಯಾಯಾಧೀಶರು ಹೇಳಿದರು. ಇದಕ್ಕೆ ಉತ್ತರಿಸಿದ ಆರೋಪಿಗಳ ಪರ ವಕೀಲರು, ಇಬ್ರಾಹಿಂ ಕೈಯಲ್ಲಿ ಕತ್ತಿ ಹಿಡಿದುಕೊಂಡಿರುವ ದೃಶ್ಯ, ಕೃತ್ಯ ನಡೆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಪೊಲೀಸ್ ಹತ್ಯೆ ಪ್ರಕರಣಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕೆ ಇಬ್ಬರ ಮೇಲೆ ಆರೋಪ ಹೊರಿಸಲಾಗಿದೆ ಎಂದು ವಾದಿಸಿದರು. ಅಲ್ಲದೆ ಮೃತ ಪೊಲೀಸ್ ಸಿಬ್ಬಂದಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ಪೊಲೀಸ್ ಸಿಬ್ಬಂದಿಯ ದೇಹದಲ್ಲಿ ಕತ್ತಿಯಿಂದಾದ ಗಾಯವಿರಲಿಲ್ಲ ಎಂದು ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ತನಿಖೆ ಮುಕ್ತಾಯವಾಗಿದ್ದು ಆರೋಪಪಟ್ಟಿಯನ್ನೂ ದಾಖಲಿಸಲಾಗಿದೆ. ಆದ್ದರಿಂದ ಆರೋಪಿಗಳ ಕಸ್ಟಡಿಯನ್ನು ವಿಸ್ತರಿಸುವ ಅಗತ್ಯವೇ ಇಲ್ಲ ಎಂದರು. ಇದಕ್ಕೆ ವಿಶೇಷ ಸರಕಾರಿ ಅಭಿಯೋಜಕರು ಆಕ್ಷೇಪ ಸೂಚಿಸಿದರು. ವಾದ ವಿವಾದ ಆಲಿಸಿದ ನ್ಯಾಯಾಧೀಶರು, ಮೇಲ್ನೋಟಕ್ಕೆ ಇದೊಂದು ಪೂರ್ವ ನಿಯೋಜಿತ ಸಂಚಿನಂತೆ ತೋರುತ್ತದೆ. ವಝೀರಾಬಾದ್ ಮುಖ್ಯರಸ್ತೆ ಸಂಚಾರಕ್ಕೆ ತಡೆಯೊಡ್ಡುವುದು ಈ ಕೃತ್ಯದ ಮುಖ್ಯ ಉದ್ದೇಶವಾಗಿದ್ದು , ಪೊಲೀಸರು ತಡೆದರೆ ಬಲ ಪ್ರಯೋಗಿಸಿ ಅವರನ್ನು ಹಿಮ್ಮೆಟ್ಟಿಸುವ ಯೋಜನೆಯಿತ್ತು . ಆದ್ದರಿಂದ ಜಾಮೀನು ನಿರಾಕರಿಸಲಾಗಿದೆ ಎಂದು ತೀರ್ಪು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News