ಶೇರು ಮಾರುಕಟ್ಟೆಗಳಲ್ಲಿ ಭಾರೀ ಕುಸಿತ, ಹೂಡಿಕೆದಾರರಿಗೆ 4.23 ಲ.ಕೋ.ರೂ.ನಷ್ಟ

Update: 2020-09-21 16:40 GMT
ಸಾಂದರ್ಭಿಕ ಚಿತ್ರ

ಮುಂಬೈ,ಸೆ.21: ಯುರೋಪ್‌ನಲ್ಲಿ ಕೊರೋನ ವೈರಸ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನೊಂದು ಸುತ್ತಿನ ಲಾಕ್‌ಡೌನ್ ಹೇರಬಹುದು ಎಂಬ ಭೀತಿಯ ನಡುವೆ ಜಾಗತಿಕ ಮಾರುಕಟ್ಟೆಗಳಲ್ಲಿ ಶೇರುಗಳ ಮಾರಾಟದ ಭರಾಟೆಗೆ ಅನುಗುಣವಾಗಿ ಭಾರತೀಯ ಶೇರು ಮಾರುಕಟ್ಟೆಗಳೂ ಸೋಮವಾರ ಭಾರೀ ಕುಸಿತಕ್ಕೆ ಸಾಕ್ಷಿಯಾದವು. ಮುಂಬೈ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ 812 ಅಂಶಗಳಷ್ಟು ಮುಗ್ಗರಿಸಿದರೆ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ 11,300ಕ್ಕಿಂತ ಕೆಳಗಿಳಿದಿದೆ.

ಎಲ್ಲ ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳವು 1,54,76,979.16 ಕೋ.ರೂ.ಗೆ ಕುಸಿದಿದ್ದು,ಹೂಡಿಕೆದಾರರು 4.23 ಲ.ಕೋ.ರೂ.ಗಳ ಸಂಪತ್ತನ್ನು ಕಳೆದುಕೊಂಡಿದ್ದಾರೆ.

ಸತತ ಮೂರನೇ ದಿನವೂ ಕುಸಿದ ಸೆನ್ಸೆಕ್ಸ್ 811.68 (ಶೇ.2.09) ಅಂಶಗಳನ್ನು ಕಳೆದುಕೊಂಡು 38,034.14ರಲ್ಲಿ ಮುಕ್ತಾಯಗೊಂಡರೆ,ನಿಫ್ಟಿ 254.40 ಅಂಶಗಳನ್ನು ಕಳೆದುಕೊಂಡು 11,250.55ರಲ್ಲಿ ದಿನದಾಟ ಮುಗಿಸಿದೆ.

ಕೋವಿಡ್-19 ಸೋಂಕು ಹೆಚ್ಚಳವನ್ನು ಎದುರಿಸಲು ಡೆನ್ಮಾರ್ಕ್,ಗ್ರೀಸ್ ಮತ್ತು ಸ್ಪೇನ್ ಚಟುವಟಿಕೆಗಳ ಮೇಲೆ ಮತ್ತೆ ನಿರ್ಬಂಧಗಳನ್ನು ಹೇರಿವೆ. ಬ್ರಿಟನ್ ಕೂಡ ಎರಡನೇ ಸುತ್ತಿನ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರುವುದನ್ನು ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ ಯರೋಪ್‌ನಲ್ಲಿಯ ಹೂಡಿಕೆದಾರರು ಪ್ರವಾಸ,ಬಳಕೆದಾರ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಶೇರುಗಳನ್ನು ಮಾರಾಟ ಮಾಡಿದ್ದಾರೆ.

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುರೋಪ್‌ನಲ್ಲಿ ಹೆಚ್ಚುವರಿ ನಿರ್ಬಂಧಗಳನ್ನು ಹೇರುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಸದ್ಯಕ್ಕೆ ಮಾರುಕಟ್ಟೆಗಳು ಅನಿಶ್ಚಿತತೆಯಲ್ಲಿ ಮುಂದುವರಿಯಲಿವೆ. ಹೀಗಾಗಿ ಹೂಡಿಕೆದಾರರು ಎಚ್ಚರಿಕೆಯಿಂದಿರಬೇಕಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಿಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಅಭಿಪ್ರಾಯಿಸಿದ್ದಾರೆ.

ಇದೇ ವೇಳೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ನೆದುರು ಏಳು ಪೈಸೆಗಳಷ್ಟು ಬಲಗೊಂಡಿರುವ ರೂಪಾಯಿ 73.38ರಲ್ಲಿ ಮುಕ್ತಾಯಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News