ಮನಪಾ: ಆಡಳಿತ-ವಿಪಕ್ಷ ಸದಸ್ಯರ ಮಾತಿನ ಚಕಮಕಿ

Update: 2020-09-22 09:12 GMT

 ಮಂಗಳೂರು, ಸೆ.22: ಪಾಲಿಕೆಯ ವಾರ್ಡ್‌ಗಳಲ್ಲಿ ತುರ್ತು ಕಾಮಗಾರಿಗಳಿಗೆ ಸಂಬಂಧಿಸಿ ಕ್ರಮ ಕೈಗೊಳ್ಳಲು ಅನುಕೂಲವಾವಂತೆ ಮೇಯರ್ ದಿವಾಕರ ಪಾಂಡೇಶ್ವರ ಇಂದು ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ತಲಾ 25 ಲಕ್ಷ ರೂ.ನಂತೆ ಅನುದಾನ ಘೋಷಣೆ ಮಾಡಿದ್ದು, ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ರಸ್ತೆ ಅಭಿವೃದ್ಧಿ, ಒಳಚರಂಡಿ, ನೀರು ಸರಬರಾಜು ಸೇರಿದಂತೆ ವಾರ್ಡ್‌ಗಳಲ್ಲಿ ಈ ಅನುದಾನದಲ್ಲಿ ಕಾಮಗಾರಿಗಳಿಗೆ ಈ ಅನುದಾನ ಘೋಷಣೆ ಮಾಡುತ್ತಿರುವುದಾಗಿ ಮೇಯರ್ ಸಭೆಯಲ್ಲಿ ಘೋಷಿಸಿದರು.

ವಿಪಕ್ಷ ಸದಸ್ಯ ವಿನಯ್ ರಾಜ್ ಪ್ರತಿಕ್ರಿಯಿಸಿ, 2020-21ನೆ ಸಾಲಿನ ಪಾಲಿಕೆಯ ಬಜೆಟ್ ಪ್ರಸ್ತಾಪಕ್ಕೆ ಇನ್ನೂ ಸರಕಾರದಿಂದ ಅನುಮೋದನೆ ದೊರಕಿಲ್ಲ. ಸಾಮಾನ್ಯ ನಿಧಿ (ಜನರಲ್ ಫಂಡ್)ಯಡಿ ಈ ಹಿಂದಿನ ವಿವಿಧ ಕಾಮಗಾರಿಗಳ ಸುಮಾರು 70 ಕೋಟಿ ರೂ. ಬಿಲ್ ಪಾವತಿಗೆ ಬಾಕಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಸಾಮಾನ್ಯ ನಿಧಿಯಡಿ ಕಾಮಗಾರಿ ಎಂದಾಗ ಗುತ್ತಿಗೆದಾರರು ಮುಂದೆ ಬರಲು ಹಿಂದೇಟು ಹಾಕುತ್ತಾರೆ. ಆಸ್ತಿ ತೆರಿಗೆ ಶೇ. 28.48ರಷ್ಟು ಮಾತ್ರವೇ ಸಂಗ್ರಹವಾಗಿದೆ. ಜಾಹೀರಾತು ತೆರಿಗೆ 3.98 ಮಾತ್ರ ಸಂಗ್ರಹವಾಗಿರುವುದು. ತೆರಿಗೆ ಸಂಗ್ರಹದಲ್ಲಿ ಕಂದಾಯ ಇಲಾಖೆ ಎಡವಿದೆ. ಪಾಲಿಕೆ ಖಾತೆಯಲ್ಲಿ ನೀರಿನ ಶುಲ್ಕ ಸಂಗ್ರಹದ 4 ಕೋಟಿ ರೂ. ಹೊರತುಪಡಿಸಿ ಹಣವೇ ಇಲ್ಲ. ಮನಪಾ ಕಂದಾಯ ಇಲಾಖೆ ದಿವಾಳಿಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ ಹೇಗೆ ನಡೆಸುವುದು ಎಂದು ಆಕ್ಷೇಪಿಸಿದರು.

ಮೇಯರ್ ದಿವಾಕರ ಪಾಂಡೇಶ್ವರ ಪ್ರತಿಕ್ರಿಯಿಸಿ, ನಾವು ಅಧಿಕಾರಕ್ಕೆ ಬರುವಾಗ ಹಿಂದಿನ ಸಾಲ ಸಾಕಷ್ಟು ಇತ್ತು ಎಂದರು. ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯಿಸಿ, ಕೊರೋನದಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಮೇಯರ್‌ರವರು ಸದಸ್ಯರ ಹಿತದೃಷ್ಟಿಯನ್ನಿಟ್ಟು ಅನುದಾನ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ವಿಪಕ್ಷದಿಂದ ಈ ರೀತಿಯ ರಾಜಕೀಯ ಆರೋಪ ಸರಿಯಲ್ಲ ಎಂದರು.

ವಿನಯ್‌ರಾಜ್ ಪ್ರತಿಕ್ರಿಯಿಸುತ್ತಾ, ನಾನು ಆರೋಪ ಮಾಡುತ್ತಿಲ್ಲ. ವಾಸ್ತವವನ್ನು ತೆರೆದಿಡುತ್ತಿದ್ದೇನೆ ಎಂದಾಗ ಹಿರಿಯ ಸದಸ್ಯ ಸುಧೀರ್ ಶೆಟ್ಟಿ ಮಾತನಾಡಿ, ನಿಮ್ಮ ಅವಧಿಯಲ್ಲಿ ಏನೆಲ್ಲಾ ಮಾಡಿದ್ದೀರಿ ತಿಳಿದಿದೆ. ನಮಗೆ ಅಧಿಕಾರ, ಆಡಳಿತ ಮಾಡಲು ಗೊತ್ತಿದೆ. ನೀವು ತಿಳಿಸುವ ಅಗತ್ಯವಿಲ್ಲ. ರಾಜಕೀಯ ಮಾಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಕೆಲ ಹೊತ್ತು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಪಚ್ಚನಾಡಿಯಲ್ಲಿ ಪೌರ ಕಾರ್ಮಿಕರಿಗೆ ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲಾಗಿದೆ ಎಂಬ ಆರೋಪ ಇಂದು ಮತ್ತೆ ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿಸಿತು. ಸದಸ್ಯರಾದ ಅನಿಲ್ ಕುಮಾರ್ ಕಳೆದ ಸಭೆಯಲ್ಲಿ ಅನಧಿಕೃತ ಕಟ್ಟಡ ತೆರವಿಗೆ ಆದೇಶಿಸಲಾಗಿದ್ದರೂ ಕ್ರಮ ಆಗಿಲ್ಲ ಎಂದರು.

ಈ ಸಂದರ್ಭ ಸ್ಥಳೀಯ ಸದಸ್ಯೆ ಸಂಗೀತಾ ನಾಯಕ್ ಪ್ರತಿಕ್ರಿಯಿಸಿ, ಅಲ್ಲಿ ಈ ಹಿಂದೆಯೇ 28 ಮನೆಗಳು ಅನಧಿಕೃತವಾಗಿ ಕಟ್ಟಿ ಅವರಿಗೆ ಹಿಂದಿನ ಸದಸ್ಯರು ದಾರಿ ವ್ಯವಸ್ಥೆಯನ್ನೂ ಮಾಡಿದ್ದಾರೆ ಎಂದರು.

ಅದು ಪೌರ ಕಾರ್ಮಿಕರಿಗಾಗಿ ಮೀಸಲಿಟ್ಟ ಜಾಗ. ಅವರ ಹಕ್ಕನ್ನು ಕಸಿಯುವುದು ಬೇಡ ಎಂದು ಸದಸ್ಯ ಅನಿಲ್ ಕುಮಾರ್ ಮತ್ತೆ ಧ್ವನಿ ಎತ್ತಿದರು.

ವಿಪಕ್ಷ ನಾಯಕ ಅಬ್ದುಲ್ ರವೂಫ್ ಮಾತನಾಡಿ, ಅದು ಪಾಲಿಕೆಯ ಸಾರ್ವಜನಿಕರ ಆಸ್ತಿ. ಹಾಗಿರುವಾಗ ಅಕ್ರಮವಾಗಿ ನಿರ್ಮಾಣ ಮಾಡಲು ಯಾರಿಗೂ ಅಧಿಕಾರ ಇಲ್ಲ ಎಂದರು. ಈ ಸಂದರ್ಭ ಮೇಯರ್ ದಿವಾಕರ ಪಾಂಡೇಶ್ವರ ಪ್ರತಿಕ್ರಿಯಿಸಿ, ಹಾಗಿದ್ದರೆ ಹಿಂದೆ ಆಗಿರುವ ಎಲ್ಲಾ ಕಟ್ಟಡಗಳನ್ನು ಕೆಡವಲು ತಯಾರಿದ್ದೀರಾ ಎಂದು ಪ್ರಶ್ನಿಸಿದರು.

ಅಕ್ರಮವಾಗಿರುವುದನ್ನು ತೆಗೆಸಲು ನಮ್ಮ ಅಭ್ಯಂತರವಿಲ್ಲ ಎಂದು ವಿಪಕ್ಷ ನಾಯಕ ಸೇರಿದಂತೆ ಸದಸ್ಯರು ದನಿಗೂಡಿಸಿದರು.

ಈ ಸಂದರ್ಭ ಹಿರಿಯ ಸದಸ್ಯ ಸುಧೀರ್ ಶೆಟ್ಟಿ ಮಾತನಾಡಿ, ನಿಮ್ಮ ಹಿಂದಿನ ಕಾರ್ಪೊರೇಟರ್ ಮಾಡಬಹುದಾದರೆ ನಮ್ಮ ಕಾರ್ಪೊರೇಟರ್ ಯಾಕೆ ಮಾಡಬಾರದು ಎಂದು ಪ್ರಶ್ನಿಸಿದರು. ಈ ಸಂದರ್ಭ ಕೆಲ ಹೊತ್ತು ಸಭೆಯಲ್ಲಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸಭೆಯಲ್ಲಿ ಉಪ ಮೇಯರ್ ವೇದಾವತಿ, ಪಾಲಿಕೆ ಆಯುಕ್ತರಾದ ಅಕ್ಷಯ್ ಶ್ರೀಧರ್ ಹಾಗೂ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.


ಪ್ರತಿ ತಿಂಗಳು ನೀರಿನ ಅದಾಲತ್

ಗೃಹ ಬಳಕೆಯ ನೀರಿನ ಶುಲ್ಕಕ್ಕೆ ಸಂಬಂಧಿಸಿ ಸಾಕಷ್ಟು ಗೊಂದಲವಾಗುತ್ತಿದ್ದು, ಭಾರೀ ಪ್ರಮಾಣದಲ್ಲಿ ಬಿಲ್ ಬರುತ್ತಿದೆ. ಜನಸಾಮಾನ್ಯರಿಗೆ ಇದು ಸಾಧ್ಯವಾಗದೆ ಕಷ್ಟ ಪಡುತ್ತಿದ್ದಾರೆ ಎಂದು ಸದಸ್ಯ ನವೀನ್ ಡಿಸೋಜ ಆಕ್ಷೇಪಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಶಶಿಧರ ಹೆಗ್ಡೆ, ಹಲವು ತಿಂಗಳಿನಿಂದ ನೀರಿನ ದರದಲ್ಲಿ ಸಮಸ್ಯೆಯಾಗುತ್ತಿದೆ. ಕಳೆದ ಸಭೆಯಲ್ಲಿ ನೀರಿನ ದರದಲ್ಲಿ ಕೊಂಚ ಇಳಿಕೆ ಮಾಡಲಾಗಿದೆ. ಆದರೆ ಗೃಹ ಬಳಕೆಯ ನೀರಿನ ದರವನ್ನು ಈ ಹಿಂದಿನಂತೆ ಆರಂಭದ 24,000 ಲೀಟರ್ ಬಳಕೆಯವರೆಗೆ 80 ರೂ.ಗೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಹಿರಿಯ ಸದಸ್ಯ ಲ್ಯಾನ್ಸಿ ಲಾಟ್ ಪಿಂಟೋ ಪ್ರತಿಕ್ರಿಯಿಸಿ, ಹಿಂದಿನಂತೆ ನೀರಿನ ಅದಾಲತ್ ಆರಂಭಿಸಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು. ಮೇಯರ್ ದಿವಾಕರ ಪಾಂಡೇಶ್ವರ ಪ್ರತಿಕ್ರಿಯಿಸಿ, ತಿಂಗಳಿಗೊಮ್ಮೆ ನೀರಿನ ಅದಾಲತ್ ನಡೆಸಿ ಜನಸಾಮಾನ್ಯರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News