ಮಂಗಳೂರು: ಲೈಟ್‌ಹೌಸ್ ಹಿಲ್ ರಸ್ತೆಗೆ ‘ಮುಲ್ಕಿ ಸುಂದರ ರಾಮ ಶೆಟ್ಟಿ’ ನಾಮಕರಣ

Update: 2020-09-22 12:16 GMT

ಮಂಗಳೂರು, ಸೆ. 22: ನಗರದ ಅಂಬೇಡ್ಕರ್ ವೃತ್ತದಿಂದ ಲೈಟ್‌ಹೌಸ್ ಮಾರ್ಗದ ಕ್ಯಾಥೋಲಿಕ್ ಕ್ಲಬ್‌ವರೆಗಿನ ರಸ್ತೆಗೆ ‘ಮುಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ’ ಎಂಬುದಾಗಿ ನಾಮಕರಣ ಮಾಡಿ ಸರಕಾರ ಆದೇಶ ಹೊರಡಿಸಿದೆ ಎಂದು ಮೇಯರ್ ದಿವಾಕರ್ ಪಾಂಡೇಶ್ವರ ಅವರು ಇಂದು ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಘೋಷಿಸಿದರು.

ಮಾತ್ರವಲ್ಲದೆ, ಸೆ. 23ರಂದು ಸಮಾರಂಭ ನಡೆಸಿ ನಾಮಕರಣ ಮಾಡುವುದಾಗಿಯೂ ಮೇಯರ್ ದಿವಾಕರ ಪಾಂಡೇಶ್ವ ತಿಳಿಸಿದರು.

ವಿಜಯಾ ಬ್ಯಾಂಕ್ (ಸದ್ಯ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನವಾಗಿದೆ)ನ ಸುಧಾರಣೆಯ ಹರಿಕಾರರಾಗಿದ್ದ ಸುಂದರ ರಾಮ ಶೆಟ್ಟಿಯವರು ಬ್ಯಾಂಕ್ ಚೇರ್ ಮ್ಯಾನ್ ಆಗಿಯೂ ಸೇವೆ ಸಲ್ಲಿಸಿದವರು. ಅಂಬೇಡ್ಕರ್ ವೃತ್ತದಿಂದ ಲೈಟ್‌ಹೌಸ್ ಹಿಲ್ ಮೂಲಕ ಕೆಥೋಲಿಕ್ ಕ್ಲಬ್ ವರೆಗಿನ ರಸ್ತೆಯನ್ನು ಮುಲ್ಕಿ ಸುಂದರರಾಮ ಶೆಟ್ಟಿ ಎಂದು ನಾಮಕರಣ ಮಾಡಿರುವ ಎರಡು ವರ್ಷದ ಹಿಂದಿನ ನಿರ್ಧಾರವನ್ನು ರಾಜ್ಯ ಸರ್ಕಾರ ಮತ್ತೆ ಪುನರ್‌ಸ್ಥಾಪಿಸಿ ಆದೇಶಿಸಿದೆ.

ಎರಡು ವರ್ಷ ಹಿಂದೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ಈ ನಿರ್ಣಯ ಅಂಗೀಕಾರಗೊಂಡು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಸರ್ಕಾರವೂ 2017ರ ಮೇ ತಿಂಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿತ್ತು. ಈ ಕುರಿತು ಆಕ್ಷೇಪ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ನಾಮಕರಣವನ್ನು ತಡೆ ಹಿಡಿದಿತ್ತು. ಇದರ ವಿರುದ್ಧ ವಿಜಯ ಬ್ಯಾಂಕ್ ನಿವೃತ್ತ ನೌಕರರ ಸಂಘದವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಮೊದಲು ತಡೆಯಾಜ್ಞೆ ನೀಡಿದರೂ 2019ರ ಏಪ್ರಿಲ್ 11ರಂದು ಆದೇಶ ನೀಡಿ, ಇದು ಆಡಳಿತಾತ್ಮಕ ತೀರ್ಮಾನ ಎಂದು ಸರ್ಕಾರಕ್ಕೆ ಪುನರ್ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.

ಇದರ ಹಿನ್ನೆಲೆಯಲ್ಲಿ ಮನಪಾ ಆಯುಕ್ತರಲ್ಲಿ ಮನವಿಯನ್ನು ಪುನರ್‌ಪರಿಶೀಲಿಸಿ, ತಮ್ಮ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸರ್ಕಾರವು ಸೂಚಿಸಿತ್ತು. ಆಯುಕ್ತರಾಗಿದ್ದ ಅಜಿತ್ ಕುಮಾರ್ ಶಾನಾಡಿಯವರು ಕೆಲ ತಿಂಗಳ ಹಿಂದೆಯೇ ವರದಿಯನ್ನೂ ಸಲ್ಲಿಸಿದ್ದು ರಸ್ತೆಗೆ ನಾಮಕರಣ ಮಾಡಬಹುದು ಎಂದು ಸೂಚಿಸಿದ್ದರು. ಅದನ್ನು ಪರಿಗಣಿಸಿದ ಸರ್ಕಾರ ಈಗ ಈ ಪುನಸ್ಥಾಪನಾ ಆದೇಶ ಮಾಡಿದೆ.
ಸಭೆಯಲ್ಲಿ ಮಂಗಳೂರು ರೈಲ್ವೇ ಜಂಕ್ಷನ್ ಹಾಗೂ ಅದನ್ನು ಸಂಪರ್ಕಿಸುವ ರಸ್ತೆಗೆ ದಿವಗಂತ, ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರನ್ನಿಡುವ ಪ್ರಸ್ತಾಪವನ್ನು ಹಿರಿಯ ಸದಸ್ಯ ಸುಧೀರ್ ಶೆಟ್ಟಿ ಪ್ರಸ್ತಾಪಿಸಿದರು.

ಈ ಸಂದರ್ಭ ಹಿರಿಯ ಸದಸ್ಯ ಲ್ಯಾನ್ಸಿ ಲಾಟ್ ಪಿಂಟೋ ಅವರು ಮಾತನಾಡಿ, ಈ ಹಿಂದೆ ನಾನು ಸಭೆಯಲ್ಲಿ ಬಿಜೈ ನ್ಯೂರೋಡ್‌ಗೆ ದಿವಂಗತ ಜಾರ್ಜ್ ಫೆರ್ನಾಂಡಿಸ್‌ರವರ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿದ್ದೆ. ಅವರ ಕುಟಂಬಸ್ಥರು ಮುಖ್ಯ ರಸ್ತೆಯೊಂದಕ್ಕೆ ಅವರ ಹೆಸರು ಮಾಡುವ ಬೇಡಿಕೆ ಇಟ್ಟಿದ್ದರು. ಅದನ್ನೂ ನಾನು ಪ್ರಸ್ತಾಪಿಸಿದ್ದೆ ಎಂದು ಸಭೆಯಲ್ಲಿ ನೆನಪಿಸಿದರು.

ಇದಲ್ಲದೆ ಸಭೆಯಲ್ಲಿ ಹಂಪನ್‌ಕಟ್ಟೆ ಜಂಕ್ಷನ್‌ನಲ್ಲಿ ಪತ್ತೆಯಾದ ಹಳೆಯದಾದ ಬಾವಿಯನ್ನು ಪುನರುಜ್ಜೀವನಗೊಳಿಸಿ ಅದಕ್ಕೆ ಅಪ್ಪಣ್ಣ ಕಟ್ಟೆ ಎಂದು ನಾಮಕರಣ ಮಾಡಬೇಕೆಂದು ಮನಪಾ ಸದಸ್ಯ ವಿನಯರಾಜ್ ಆಗ್ರಹಿಸಿದರು. ಮೇಯರ್ ದಿವಾಕರ ಪಾಂಡೇಶ್ವರ ಪ್ರತಿಕ್ರಿಯಿಸಿ, ಹಳೆಯ ಬಾವಿಯನ್ನು ಉಳಿಸಿ ಸಂರಕ್ಷಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಮನಪಾ ಲಾಕ್‌ಡೌನ್‌ನಲ್ಲಿ ಕಲುಷಿತ ನೀರು ಪೂರೈಕೆ ಆರೋಪ : ಅಧಿಕಾರಿಗೆ ಶೋಕಾಸು ನೋಟಿಸು

ಲಾಕ್‌ಡೌನ್ ಅವಧಿಯಲ್ಲಿ ಸುಮಾರು ಎರಡು ತಿಂಗಳಿಗೂ ಅಧಿಕ ಅವಧಿಗೆ ನಗರಕ್ಕೆ ಕಲುಷಿತ ನೀರು ಪೂರೈಕೆ ಮಾಡಿದ ಆರೋಪದ ಹಿನ್ನೆಲೆ ಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗೆ ಶೋಕಾಸು ನೋಟಿಸು ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.

ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ, ಲಾಕ್‌ಡೌನ್ ಸಂದರ್ಭದಲ್ಲಿ ಪಾಲಿಕೆ ವತಿಯಿಂದ ಕಲುಷಿತ ನೀರು ಪೂರೈಕೆಗೆ ಸಂಬಂಧಿಸಿ ತನಿಖೆ ಮಾಡುವುದಾಗಿ ಮೇಯರ್ ತಿಳಿಸಿದ್ದು, ತನಿಖೆ ಯಾವ ಹಂತದಲ್ಲಿದೆ ಎಂದು ವಿಪಕ್ಷ ನಾಯಕ ಅಬ್ದುಲ್ ರವೂಫ್ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮನಪಾ ಆಯುಕ್ತರು, ಸಾಮಾನ್ಯವಾಗಿ ನೀರಿನ ಪಿಎಚ್ ಮಟ್ಟ 6.5ರಿಂದ 7.5 ಆಗಿರಬೇಕು. ಆದರೆ ವಿಪಕ್ಷ ನಾಯಕರು ಆರೋಪಿಸಿದಂತೆ ಆ ಅವಧಿಯಲ್ಲಿನ ನೀರಿನ ಮಾದರಿಯ ವರದಿಯ ಪ್ರಕಾರ ಪಿಎಚ್ ಮಟ್ಟ 6.3. ಅದು ಆರೋಗ್ಯಕ್ಕೆ ಅಪಾಯಕಾರಿ ಅಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಹಾಗಿದ್ದರೂ ಅದರಲ್ಲಿ ಅಧಿಕಾರಿಗಳ ಲೋಪ ದೋಷ ಇರುವುದು ಕಂಡು ಬಂದಿರುವುದರಿಂದ ಸ್ಪಷ್ಟನೆ ಕೋರಿ ಶೋಕಾಸು ನೋಟಿಸು ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News