‘ವಾರ್ತಾಭಾರತಿ’ ವರದಿಗೆ ಓದುಗರ ಸ್ಪಂದನ:ಕೆಎಸ್ಸಾರ್ಟಿಸಿ ನೌಕರರ ಒಕ್ಕೂಟದಿಂದ ವಿದ್ಯಾರ್ಥಿಗೆ ಸ್ಮಾರ್ಟ್ ಫೋನ್ ಉಡುಗೊರೆ

Update: 2020-09-22 14:12 GMT

ಮಂಗಳೂರು, ಸೆ. 22: ಆನ್‌ಲೈನ್ ಕ್ಲಾಸ್‌ಗಾಗಿ ಮೊಬೈಲ್ ಕೊಂಡುಕೊಳ್ಳಲು ಬೀದಿಬದಿ ಸ್ಟಿಕ್ಕರ್ ಮಾರುತ್ತಿದ್ದ ವಿದ್ಯಾರ್ಥಿಗೆ ಬೆಂಗಳೂರು ಕೆಎಸ್ಸಾರ್ಟಿಸಿ ನೌಕರರ ಒಕ್ಕೂಟವು ಮೊಬೈಲ್ ನೀಡಿ ಮಾನವೀಯತೆ ಮೆರೆದಿದೆ.

ಸೆ.15ರಂದು ‘ವಾರ್ತಾಭಾರತಿ’ ದಿನಪತ್ರಿಕೆಯ ಮುಖಪುಟದಲ್ಲಿ ಉಪಸಂಪಾದಕರಾದ ಕಳಕೇಶ್ ಗೊರವರ, ರಾಜೂರ ಅವರ ‘ಮೊಬೈಲ್ ಕೊಂಡುಕೊಳ್ಳಲು ಸ್ಟಿಕ್ಕರ್ ಮಾರಾಟಕ್ಕಿಳಿದ ವಿದ್ಯಾರ್ಥಿ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಓದುಗರಿಂದ ಉತ್ತಮ ಸ್ಪಂದನ ವ್ಯಕ್ತವಾಗಿದೆ.

ಮಂಗಳೂರು ನಗರದ ವೆಲೆನ್ಸಿಯ ವೃತ್ತ ಸಮೀಪದ ‘ವಾರ್ತಾಭಾರತಿ’ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ಕೆಎಸ್ಸಾರ್ಟಿಸಿ ನೌಕರರ ಒಕ್ಕೂಟ ಹಾಗೂ ಎಐಟಿಯುಸಿ ಸಹಯೋಗದಲ್ಲಿ ವಿದ್ಯಾರ್ಥಿಗೆ ಸ್ಮಾರ್ಟ್ ಫೋನ್ ಹಸ್ತಾಂತರಿಸಲಾಯಿತು.

ಕೆಎಸ್ಸಾರ್ಟಿಸಿ ನೌಕರರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್, ಎಐಟಿಯುಸಿ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರವೀಣ ಕುಮಾರ್ ಅವರು ಮುಡಿಪು ಮೂಲದ ವಿದ್ಯಾರ್ಥಿ ಶ್ರೀನಿವಾಸ್‌ಗೆ ಸ್ಯಾಮ್‌ಸಂಗ್ ಕಂಪೆನಿಯ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್  ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಎಐಟಿಯುಸಿ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರವೀಣ ಕುಮಾರ್, ಕೆಎಸ್ಸಾರ್ಟಿಸಿ ನೌಕರರ ಒಕ್ಕೂಟ, ಎಐಟಿಯುಸಿ ಸಂಘಟನೆಗಳಿಂದ ಸಮಾಜ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ, ಕಾರ್ಮಿಕರೊಬ್ಬರ ಪುತ್ರ ವಿದ್ಯಾರ್ಥಿಯು ಆನ್‌ಲೈನ್ ಕ್ಲಾಸ್ ಕೇಳಲು ಬೀದಿಬದಿ ಸ್ಟಿಕ್ಕರ್ ಮಾರಾಟಕ್ಕೆ ಮುಂದಾಗಿರುವುದು ಗಮನಕ್ಕೆ ಬಂದಿತು. ಕೂಡಲೇ ವಿದ್ಯಾರ್ಥಿಗೆ ಸಹಾಯ ಮಾಡಲು ಸಾಧ್ಯವಾಯಿತು. ಎಐಟಿಯುಸಿ ಮುಖಂಡ ಎಚ್.ವಿ. ಅನಂತ ಸುಬ್ಬರಾವ್ ಮಾರ್ಗದರ್ಶನದಂತೆ ಬಡ ವಿದ್ಯಾರ್ಥಿಗೆ ಕಿರುಕಾಣಿಕೆ ನೀಡಲಾಯಿತು ಎಂದು ತಿಳಿಸಿದ್ದಾರೆ.

ಇದೇ ಸಂದರ್ಭ ‘ವಾರ್ತಾಭಾರತಿ’ ಮಂಗಳೂರು ಬ್ಯೂರೋ ಚೀಫ್ ಪುಷ್ಪರಾಜ್ ಬಿ.ಎನ್. ಅವರು ಪತ್ರಿಕೆ ವತಿಯಿಂದ ಕೆಎಸ್ಸಾರ್ಟಿಸಿ ನೌಕರರ ಒಕ್ಕೂಟಕ್ಕೆ ಸ್ಮರಣಿಕೆ ನೀಡಿ ಗೌರವಿಸಿದರು.

ಸಮಾರಂಭದಲ್ಲಿ ಕೆಎಸ್ಸಾರ್ಟಿಸಿ ನೌಕರರ ಒಕ್ಕೂಟದ ಪದಾಧಿಕಾರಿಗಳಾದ ಆರ್.ವಾಸುದೇವ್, ಬಾಲಕೃಷ್ಣ, ಚಂದ್ರ ಪೂಜಾರಿ, ವಿನಯರಾಜ್, ಅಬ್ದುಲ್ ಖಾದರ್, ವಾರ್ತಾಭಾರತಿಯ ಉಪಸಂಪಾದಕ ಕಳಕೇಶ್ ಗೊರವರ, ರಾಜೂರ ಮತ್ತಿತರರು ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News