ಬಿ.ಆರ್.ಶೆಟ್ಟಿ ಕಂಪೆನಿಯ ಆಸ್ಪತ್ರೆ ಕಾಮಗಾರಿ ಸ್ಥಳದಲ್ಲಿ ಕೃತಕ ನೆರೆ ಸೃಷ್ಠಿ

Update: 2020-09-22 14:28 GMT

ಉಡುಪಿ, ಸೆ.22: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾನೂನಾತ್ಮಕ ಸಮಸ್ಯೆಯಿಂದ ಅರ್ಧಕ್ಕೆ ಸ್ಥಗಿತ ಗೊಂಡಿದ್ದ ನಗರದ ಹೃದಯಭಾಗ ಕೆ.ಎಂ.ಮಾರ್ಗದಲ್ಲಿರುವ ಬಿ.ಆರ್. ಕಂಪೆನಿಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಕೃತಕ ನೆರೆ ಸೃಷ್ಠಿಯಾಗಿದೆ. ಇದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ಆತಂಕ ಮತ್ತು ಬಹುಮಹಡಿ ಕಟ್ಟಡಗಳಿಗೆ ಅಪಾಯದ ಸ್ಥಿತಿ ಎದುರಾಗಿದೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಆಸ್ಪತ್ರೆ ನಿರ್ಮಿಸಲು ಹಾಜಿ ಅಬ್ದುಲ್ಲಾ ದಾನವಾಗಿ ನೀಡಿರುವ 4.07 ಎಕರೆ ಜಾಗವನ್ನು ಸರಕಾರ ಬಿ.ಆರ್.ಶೆಟ್ಟಿ ಮಾಲಕತ್ವದ ಬಿಆರ್‌ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆಗೆ ನೀಡಿತ್ತು. ಅದರಂತೆ ಸಂಸ್ಥೆಯು ಎರಡು ವರ್ಷ ಗಳ ಹಿಂದೆ ಸುಮಾರು 1.40 ಎಕರೆ ಜಾಗದಲ್ಲಿದ್ದ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೆಡವಿ, ಖಾಸಗಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಕಾಮಗಾರಿಯನ್ನು ಆರಂಭಿಸಿತ್ತು.

ನಗರದಲ್ಲಿ ಕಾನೂನು ಬಾಹಿರವಾಗಿ ಮೂರು ನೆಲಮಹಡಿ ನಿರ್ಮಿಸಲು ಹೊರಟ ಈ ಆಸ್ಪತ್ರೆಯ ಕಾಮಗಾರಿಗೆ ನಗರಸಭೆ ತಡೆಯಾಜ್ಞೆ ನೀಡಿತ್ತು. ಇದರಿಂದ ವರ್ಷಗಳಿಂದ ಈ ಕಾಮಗಾರಿ ಸ್ಥಗಿತಗೊಂಡಿದೆ. ಇದೀಗ ಸುರಿದ ನಿರಂತರ ಮಳೆಯಿಂದಾಗಿ ಹೊಂಡಮಯವಾಗಿ ಈ ಆಸ್ಪತ್ರೆ ಕಾಮಗಾರಿ ಪ್ರದೇಶದಲ್ಲಿ ಕೃತಕ ಕೆರೆ ಸೃಷ್ಟಿಯಾಗಿದೆ. ಇದರಿಂದ ನೀರು ನಿಂತು ಸೊಳ್ಳೆಗಳ ತಾಣವಾಗಿ ಮಾರ್ಪಾಡುವ ಆತಂಕ ಎದುರಾಗಿದೆ.

ಈಗಾಗಲೇ ಈ ಕಟ್ಟಡದಲ್ಲಿ ಮೂರು ನೆಲಮಹಡಿ ನಿರ್ಮಿಸಲು ಭೂಮಿ ಯನ್ನು ಅಗೆಯಲಾಗಿದೆ. ಇದರ ಅಕ್ಕಪಕ್ಕದಲ್ಲಿ ಹಲವು ಬಹುಮಹಡಿಯ ಕಟ್ಟಡ ಗಳಿವೆ. ಇದೀಗ ಮಳೆಯಿಂದಾಗಿ ಅಗೆಯಲಾದ ಸ್ಥಳದ ಕೆಲವು ಭಾಗಗಳಲ್ಲಿ ಮಣ್ಣು ಕುಸಿದಿರುವುದು ಕಂಡುಬಂದಿದೆ. ಈ ಕಟ್ಟಡ ನಿರ್ಮಾಣ ಮಾಡುವಾಗ ಸುತ್ತಲೂ ಎತ್ತರದ ತಗಡಿನ ಬೇಲಿ ನಿರ್ಮಿಸಲಾಗಿದ್ದು. ಇದರಿಂದ ಸುತ್ತಮುತ್ತಲಿನವರಿಗೆ ಇಲ್ಲಿನ ನೈಜ ಚಿತ್ರಣ ಹಾಗೂ ಕಾಮಗಾರಿ ಸ್ಥಳದಲ್ಲಿ ಆಗುತ್ತಿರುವ ಅಪಾಯಗಳ ಬಗ್ಗೆ ಅರಿವಿಗೆ ಬರುತ್ತಿಲ್ಲ.

ಆದುದರಿಂದ ಜಿಲ್ಲಾಡಳಿತ ತಕ್ಷಣ ಈ ಬಗ್ಗೆ ಗಮನ ಹರಿಸಬೇಕು. ಅದ ರೊಂದಿಗೆ ಹೊಂಡ ಮುಚ್ಚಿಸುವ ಕಾರ್ಯ ಮಾಡಬೇಕು. ನಗರಸಭೆಯ ವರು ಈ ಪರಿಸರವನ್ನು ಸೊಳ್ಳೆ ಮುಕ್ತವನ್ನಾಗಿಸಿ ಜನರ ಆರೋಗ್ಯ ಕಾಪಾಡುವ ಬಗ್ಗೆ ಕಾಳಜಿ ವಹಿಸುವುದು ಸೂಕ್ತ ಎಂದು ಸಾಮಾಜಿಕ ಕಾರ್ಯ ಕರ್ತರಾದ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ಜಯ ಶೆಟ್ಟಿ ಬನ್ನಂಜೆ ಆಗ್ರಹಿಸಿದ್ದಾರೆ.

ಕಾನೂನು ಬಾಹಿರ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿ ನೋಟೀಸು ಜಾರಿ ಮಾಡಲಾಗಿತ್ತು. ಇದರಿಂದ ವರ್ಷ ಗಳಿಂದ ಇದರ ಕಾಮಗಾರಿ ಸ್ಥಗಿತಗೊಂಡಿದೆ. ಸಮೀಪದ ಕಟ್ಟಡಗಳಿಗೂ ಯಾವುದೇ ತೊಂದರೆ ಆಗದಂತೆ ಸೂಚಿಸಲಾಗಿದೆ. ಇದೀಗ ಮಳೆಯಿಂದ ಈ ಕಾಮಗಾರಿ ಪ್ರದೇಶದಲ್ಲಿ ನೀರು ನಿಂತಿರುವುದು ಗಮನಕ್ಕೆ ಬಂದಿದ್ದು, ಪಂಪ್ ಮೂಲಕ ನೀರನ್ನು ಕೂಡಲೇ ತೆರವು ಮಾಡಲು ಸಂಬಂಧಪಟ್ಟರಿಗೆ ನಿರ್ದೇಶನ ನೀಡಲಾಗುವುದು.
-ಮೋಹನ್‌ರಾಜ್, ಸಹಾಯಕ ಕಾರ್ಯಾಲಕ ಇಂಜಿನಿಯರ್, ಉಡುಪಿ ನಗರಸಭೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News