ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಕಡ್ಡಾಯ: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-09-22 14:30 GMT

ಉಡುಪಿ, ಸೆ.22: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿ ಗಳಿಗೆ ತಲುಪಿಸುವ ಕಾರ್ಯ ಸಮರ್ಪಕವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ ಸರಕಾರ ಅನೇಕ ಜನಪರ ಕಲ್ಯಾಣ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳ ಬಗ್ಗೆ ಸಂಬಂಧಿತ ಪೌರಕಾರ್ಮಿಕರಿಗೆ ಅರಿವು ಮೂಡಿಸುವುದರೊಂದಿಗೆ ಅವರನ್ನು ಫಲಾನುಭವಿಗಳನ್ನಾಗಿಸಬೇಕು ಎಂದರು.

ಪೌರಕಾರ್ಮಿಕರ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಸರಕಾರ ನಿಗದಿ ಪಡಿಸಿದಂತೆ ಮಾಡಿಸಬೇಕು. ಅದರ ಜೊತೆಗೆ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಹೆಲ್ತ್ ಚೆಕ್‌ಆಪ್ ಕಾರ್ಯವು ಉನ್ನತ ಆಸ್ಪತ್ರೆಯ ಸಹಯೋಗದೊಂದಿಗೆ ನಡೆಸಿ, ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದರು.

ಸ್ಥಳೀಯ ಸಂಸ್ಥೆ ವ್ಯಾಪ್ತಿ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಸಕ್ಕಿಂಗ್ ಯಂತ್ರ ಖರೀದಿಸಲು ಸಫಾಯಿ ಕರ್ಮಚಾರಿಗಳಿಗೆ ಬ್ಯಾಂಕಿನಿಂದ ಸಾಲ- ಸೌಲಭ್ಯ ಒದಗಿಸಬೇಕು ಎಂದ ಅವರು, ಇದಕ್ಕೆ ಪೂರಕವಾಗಿ ಬ್ಯಾಂಕುಗಳು ರಿಯಾಯಿತಿ ದರದಲ್ಲಿ ಸಾಲ ನೀಡುವ ವ್ಯವಸ್ಥೆಗೆ ಲೀಡ್ ಬ್ಯಾಂಕ್ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಫಲಾನುಭವಿಗಳನ್ನಾಗಿಸಿ ಅವರುಗಳಿಗೆ ನಿವೇಶನ ನೀಡುವುದರ ಜೊತೆಗೆ ಗೃಹ ನಿರ್ಮಾಣ ಮಾಡಿ ಕೊಡಬೇಕೆಂದು ತಿಳಿಸಿದ ಜಿಲ್ಲಾಧಿಕಾರಿ, ಗ್ರಾಮೀಣ ಭಾಗಗಳಲ್ಲಿ ಗ್ರಾಮ ಪಂಚಾಯತ್‌ನಿಂದ ನಿವೇಶನಗಳನ್ನು ಹಂಚಿಕೆ ಮಾಡುವಾಗ ಪೌರ ಕಾರ್ಮಿಕರಿಗೆ ಪ್ರಥಮ ಆದ್ಯತೆಯಲ್ಲಿ ನಿೇಶನ ನೀಡಬೇಕೆಂದು ನುಡಿದರು.

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪೌರ ಕಾರ್ಮಿಕರಿಗೆ ದೊರೆಯುವ ವಿವಿಧ ಸಾಲ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅವರುಗಳನ್ನು ಫಲಾನುಭವಿಗಳನ್ನಾಗಿಸಬೇಕು ಎಂದು ಜಿ.ಜಗದೀಶ್ ಸೂಚಿಸಿದರು. ಅಲ್ಲದೇ ಗ್ರಾಪಂ ಗಳಲ್ಲಿ ಪೌರಕಾರ್ಮಿಕರಾಗಿ ಸ್ವಚ್ಛತಾ ಕಾರ್ಯಗಳನ್ನು ನಿರ್ವಹಿ ಸುವವರಿಗೆ ಶಾಶ್ವತ ಉದ್ಯೋಗ ಒದಗಿಸಿ ಕೊಡಬೇಕು ಎಂದೂ ಜಿಲ್ಲಾಧಿಕಾರಿಗಳು ಹೇಳಿದರು.

ಅಲ್ಲದೇ ಗ್ರಾಪಂಗಳಲ್ಲಿ ಪೌರಕಾರ್ಮಿಕರಾಗಿ ಸ್ವಚ್ಛತಾ ಕಾರ್ಯಗಳನ್ನು ನಿರ್ವಹಿ ಸುವವರಿಗೆ ಶಾಶ್ವತ ಉದ್ಯೋಗ ಒದಗಿಸಿ ಕೊಡಬೇಕು ಎಂದೂ ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕಿರಣ್ ಫಡ್ನೆಕರ್, ಎಎಸ್ಪಿ ಕುಮಾರ್‌ಚಂದ್ರ, ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಅರುಣಪ್ರಭ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News