ಉಡುಪಿ: ಜಳಪ್ರಳಯದಿಂದ 290 ಕೋಟಿ ರೂ. ಅಧಿಕ ನಷ್ಟದ ಅಂದಾಜು

Update: 2020-09-22 14:45 GMT

ಉಡುಪಿ, ಸೆ. 22: ಉಡುಪಿ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಸುರಿದ ಭಾರೀ ಮಳೆಯಿಂದ ಉಂಟಾದ ಜಲಪ್ರಳಯದಿಂದ ಈವರೆಗೆ ಸುಮಾರು 290 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿರಬಹುದೆಂದು ಜಿಲ್ಲಾಡಳಿತ ಅಂದಾಜಿಸಿದೆ.

ಪ್ರವಾಹದಿಂದ ಜಿಲ್ಲೆಯಲ್ಲಿ ನೂರಾರು ಮನೆಗಳು, ಸೇತುವೆ, ವಿದ್ಯುತ್ ವ್ಯವಸ್ಥೆ, ಕೃಷಿ, ತೋಟಗಾರಿಕೆ ಬೆಳೆಗಳು, ಶಾಲೆ ಮತ್ತು ಅಂಗನವಾಡಿ ಕಟ್ಟಡ ಗಳು, ಅಂಗಡಿಮಗ್ಗಟ್ಟು, ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ರಸ್ತೆ ಸೇರಿದಂತೆ ವಿವಿಧ ಸೊತ್ತುಗಳಿಗೆ ಅಪಾರ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಜಿಲ್ಲಾಡಳಿತ 40 ಕೋಟಿ ರೂ. ತುರ್ತು ಪರಿಹಾರ ನಿಧಿ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

138 ಮನೆಗಳಿಗೆ ಹಾನಿ: ಜಿಲ್ಲಾಡಳಿತ ನೀಡಿದ ಅಧಿಕೃತ ಅಂಕಿಅಂಶಗಳ ಪ್ರಕಾರ ಈವರೆಗೆ 138 ಮನೆಗಳಿಗೆ ಹಾನಿಯಾಗಿ ಒಂದು ಕೋಟಿ ರೂ. ಅಧಿಕ ನಷ್ಟ ಉಂಟಾಗಿದೆ. ವಿವಿಧ ತಾಲೂಕು ಕಚೇರಿಗಳ ಮೂಲಗಳ ಪ್ರಕಾರ ಈವರೆಗೆ ದೊರೆತ ಅಧಿಕೃತ ಮಾಹಿತಿಯಂತೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 92 ಮನೆಗಳಿಗೆ ಹಾನಿಯಾಗಿದ್ದು, ಸುಮಾರು 91ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಕಾಪು ತಾಲೂಕಿನಲ್ಲಿ 28 ಮನೆಗಳಿಗೆ 34.89ಲಕ್ಷ ರೂ., ಉಡುಪಿ 28 ಮನೆಗಳಿಗೆ 32.64ಲಕ್ಷ ರೂ., ಬ್ರಹ್ಮಾವರ 25 ಮನೆಗಳಿಗೆ 18.45ಲಕ್ಷ ರೂ., ಕಾರ್ಕಳ 6 ಮನೆಗಳಿಗೆ 1.80ಲಕ್ಷ ರೂ., ಬೈಂದೂರು 4 ಮನೆಗಳಿಗೆ 3ಲಕ್ಷ ರೂ. ಮತ್ತು ಕುಂದಾಪುರದಲ್ಲಿ ಒಂದು ಮನೆಗೆ 25ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಉಳಿದಂತೆ ಮನೆಮನೆಗಳಿಗೆ ತೆರಳಿ ಕಂದಾಯ ಅಧಿಕಾರಿಗಳು ಹಾನಿ ಸಮೀಕ್ಷೆ ನಡೆಸುತ್ತಿದ್ದು, ಇನ್ನಷ್ಟೆ ಸಂಪೂರ್ಣ ನಷ್ಟ ಮಾಹಿತಿ ದೊರೆಯಬೇಕಾಗಿದೆ. ಇಂದು ಮಳೆ ಸ್ವಲ್ಪ ವಿರಾಮ ನೀಡಿದ್ದು, ಕಳೆದ 24ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 48.0 ಮಿ.ಮೀಟರ್ ಮಳೆಯಾಗಿದೆ. ಉಡುಪಿ- 33.6 ಮಿ.ಮೀ., ಕುಂದಾಪುರ-72.0.ಮಿ.ಮೀ., ಕಾರ್ಕಳ- 31.5ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

35 ಹೆಕ್ಟೇರ್ ಬೆಳೆ ಹಾನಿ: ಜಿಲ್ಲೆಯಲ್ಲಿ ಮಳೆಯಿಂದಾಗಿ ಸುಮಾರು 34.66 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳು ಹಾನಿಯಾಗಿ, ಸುಮಾರು 39.32ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಉಡುಪಿ ತಾಲೂಕಿನಲ್ಲಿ 4.8 ಹೆಕ್ಟೇರ್, ಕುಂದಾಪುರ-1, ಕಾರ್ಕಳ- 0.96, ಬೈಂದೂರು- 9.9, ಬ್ರಹ್ಮಾವರ- 3.2, ಕಾಪು ತಾಲೂಕಿನಲ್ಲಿ 14.8 ಹೇಕ್ಟೇರ್ ಪ್ರದೇಶದಲ್ಲಿ ಅಡಿಕೆ, ತೆಂಗು, ಮಾವು, ಕಾಳು ಮೆಣಸು, ಬಾಳೆ, ಬದನೆ, ಅನಾನಸು ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ ಎಂದು ತೋಟಗಾರಿಕಾ ಇಲಾಖಾ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಸುಮಾರು 460 ಭತ್ತದ ಕೃಷಿ ಪ್ರದೇಶವು ಪ್ರವಾಹದಿಂದ ಜಲಾವೃತಗೊಂಡಿದ್ದು, ಇದರಲ್ಲಿ ಹಾನಿಯ ಪ್ರಮಾಣವನ್ನು ಕೃಷಿ ಇಲಾಖೆಯ ಸಮೀಕ್ಷೆಯಿಂದ ತಿಳಿದುಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಎರಡು ದಿನಗಳ ಮಳೆಯಿಂದ ಜಿಲ್ಲೆಯಲ್ಲಿ 106 ವಿದ್ಯುತ್ ಕಂಬಗಳು, 10 ವಿದ್ಯುತ್ ಪ್ರವಹಕಗಳು ಹಾಗೂ 3ಕಿ.ಮೀ.ವರೆಗಿನ ತಂತಿಗಳಿಗೆ ಹಾನಿ ಯಾಗಿ, ಸುಮಾರು 25ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗ ಹರಡುವ ಭೀತಿ

ನೆರೆ ಇಳಿದ ಬಳಿಕ ಇದೀಗ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಪ್ರವಾಹದಿಂದ ಮನೆಯೊಳಗೆ ಹಾಗೂ ಬಾವಿಗೆ ಕೊಳಚೆ ನೀರು ಹರಿದ ಪರಿಣಾಮ ವಿವಿಧ ರೀತಿಯ ಕಾಯಿಲೆಗಳು ಹರಡಬಹುದೆಂಬ ಆತಂಕ ಎಲ್ಲ ಕಡೆಗಳಲ್ಲಿ ಮನೆ ಮಾಡಿದೆ.

ಹಲವು ಕಟ್ಟಡ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೀರು ನಿಂತ ಪರಿಣಾಮ ಸೊಳ್ಳೆಗಳ ಉತ್ಪತ್ತಿಯಾಗಿ ಡೆಂಗ್, ಮಲೇರಿಯಾದಂತಹ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದು, ಜನರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ.

ಎರಡು ದಿನಗಳ ಕಾಲ ಸುರಿದ ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಸುಮಾರು 290 ಕೋಟಿ ರೂ. ನಷ್ಟ ಉಂಟಾಗಿರಬಹುದೆಂದು ಈವರೆಗೆ ಅಂದಾಜಿಸ ಲಾಗಿದೆ. ಇನ್ನು ಕೂಡ ಹಾನಿಯ ಸಮೀಕ್ಷೆ ಮುಂದುವರೆದಿದೆ. ಅದೇ ರೀತಿ 40 ಕೋಟಿ ರೂ. ತುರ್ತು ಪರಿಹಾರ ನಿಧಿ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ.

-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News