ಎನ್‌ಎಚ್‌ಎಂ ಸಿಬ್ಬಂದಿಗಳ ಮುಷ್ಕರ : ಪ್ರಕಟಗೊಳ್ಳದ ದೈನಂದಿನ ಕೊರೋನ ವರದಿ

Update: 2020-09-22 14:49 GMT

ಉಡುಪಿ, ಸೆ. 22: ರಾಜ್ಯದ ರಾಷ್ಟ್ರೀಯ ಆರೋಗ್ಯ ಮಿಷನ್‌ನ (ಎನ್‌ಎಚ್‌ಎಂ) ಸಿಬ್ಬಂದಿಗಳು ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ಪ್ರಾರಂಭಿಸಿರುವುದರಿಂದ ಪ್ರತಿದಿನ ಆರೋಗ್ಯ ಇಲಾಖೆಯ ಮೂಲಕ ಪ್ರಕಟಗೊಳ್ಳುವ ದೈನಂದಿನ ಕೋವಿಡ್-19 ಬುಲೆಟಿನ್ ಪ್ರಕಟಗೊಂಡಿಲ್ಲ.

ಎನ್‌ಎಚ್‌ಎಂ ಅಡಿಯಲ್ಲಿ ಕೆಲವು ವೈದ್ಯರು, ಸ್ಟಾಫ್ ನರ್ಸ್‌ಗಳು, ಎಎನ್‌ಎಂ ಸಿಬ್ಬಂದಿ, ಇ-ಸಂಜೀವಿನಿ ಸಿಬ್ಬಂದಿಗಳು ಹಾಗೂ ತಂತ್ರಜ್ಞರು ಬರುತಿದ್ದು ಇವರೆಲ್ಲರೂ ಇದೀಗ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು, ಮುಷ್ಕರವನ್ನು ಪ್ರಾರಂಭಿಸಿದ್ದಾರೆ. ಕೊರೋನಕ್ಕೆ ಸಂಬಂಧಿಸಿದ ಪ್ರತಿದಿನದ ಅಂಕಿಅಂಶಗಳನ್ನು, ವರದಿ ಗಳನ್ನು ಇವರೇ ಕಾಲ್‌ಸೆಂಟರ್‌ಗಳ ಮೂಲಕ ಸಂಗ್ರಹಿಸಿ ಇಲಾಖೆಗೆ ನೀಡುತಿದ್ದರು.

ಆದರೆ ಇಂದು ಇವರ್ಯಾರು ಕರ್ತವ್ಯ ನಿರ್ವಹಿಸದ ಕಾರಣ ಕೋವಿಡ್‌ಗೆ ಸಂಬಂಧಿಸಿದ ಯಾವುದೇ ಅಂಕಿಅಂಶ ಸಂಗ್ರಹಿತವಾಗಿ ಇಲಾಖೆಯ ಕೈಸೇರಿಲ್ಲ. ಹೀಗಾಗಿ ದೈನಂದಿನ ಜಿಲ್ಲಾ ಬುಲೆಟಿನ್‌ನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ತಮ್ಮ ವಿವಿಧ ಬೇಡಿಕೆಗಳ ಕುರಿತಂತೆ ಎನ್‌ಎಎಚ್‌ಎಂ ಸಿಬ್ಬಂದಿಗಳು ಒಂದು ತಿಂಗಳ ಹಿಂದೆಯೇ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದೀಗ ಅವರು ಮುಷ್ಕರದ ಮಾರ್ಗಕ್ಕೆ ಮುಂದಾಗಿದ್ದಾರೆ. ಇವರ ಮುಷ್ಕರ ಒಂದು ವಾರ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಎನ್‌ಎಚ್‌ಎಂ ಮುಷ್ಕರ ರಾಜ್ಯಾದ್ಯಂತ ನಡೆದಿರುವುದರಿಂದ ಹೆಚ್ಚಿನ ಜಿಲ್ಲೆಗಳಿಂದ ಇಂದು ಕೋವಿಡ್ ವರದಿಗಳು ಪ್ರಕಟವಾಗಿಲ್ಲ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆಯ ವರದಿಯೂ ಪ್ರಕಟಗೊಳ್ಳುವ ಸಾಧ್ಯತೆ ಕ್ಷೀಣವಿದೆ ಎಂದು ಮೂಲ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News