ಪ್ರಧಾನಮಂತ್ರಿಯ 58 ದೇಶಗಳ ಭೇಟಿಗೆ ಎಷ್ಟು ಖರ್ಚಾಗಿದೆ ಗೊತ್ತಾ?

Update: 2020-09-22 14:54 GMT

ಹೊಸದಿಲ್ಲಿ, ಸೆ.22: ಪ್ರಧಾನಮಂತ್ರಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ 58 ದೇಶಗಳಿಗೆ ಭೇಟಿ ನೀಡಿದ್ದು, ಇದಕ್ಕಾಗಿ ಒಟ್ಟು 517 ಕೋ.ರೂ. ಖರ್ಚಾಗಿದೆ ಎಂದು ಮಂಗಳವಾರ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ನೀಡಿರುವ ಲಿಖಿತ ಉತ್ತರದಲ್ಲಿ ಸರಕಾರ ತಿಳಿಸಿದೆ.

ಪ್ರಧಾನಮಂತ್ರಿ ಮೋದಿ ಅಮೆರಿಕ ಹಾಗೂ ರಶ್ಯಕ್ಕೆ ತಲಾ ಐದು ಬಾರಿ ತೆರಳಿದ್ದಾರೆ. ಲಡಾಖ್‌ನಲ್ಲಿ ಗಂಭೀರ ಗಡಿ ಬಿಕ್ಕಟ್ಟನ್ನು ಹೊಂದಿರುವ ಚೀನಾ ದೇಶಕ್ಕೆ ಕೂಡ ಐದು ಬಾರಿ ಮೋದಿ ಭೇಟಿ ನೀಡಿದ್ದರು ಎಂದು ರಾಜ್ಯ ವಿದೇಶಾಂಗ ವ್ಯವಹಾರ ಸಚಿವ ವಿ.ಮುರಳೀಧರನ್ ತಿಳಿಸಿದ್ದಾರೆ. ಸಿಂಗಾಪುರ, ಜರ್ಮನಿ, ಫ್ರಾನ್ಸ್, ಯುಎಇ ಹಾಗೂ ಶ್ರೀಲಂಕಾ ದೇಶಗಳಿಗೆ ಪ್ರಧಾನಿ ಭೇಟಿ ಕೊಟ್ಟಿದ್ದಾರೆ.

"ಈ ಎಲ್ಲ ಭೇಟಿಗಳಿಗೆ ಆಗಿರುವ ಒಟ್ಟು ಖರ್ಚು 517.82 ಕೋಟಿ ರೂ. ಎಂದು ಮುರಳೀಧರನ್ ಹೇಳಿರುವುದಾಗಿ'' ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಪ್ರಧಾನಿ ಕಳೆದ ವರ್ಷ ನವೆಂಬರ್‌ನಲ್ಲಿ ಕೊನೆಯ ಬಾರಿ ವಿದೇಶಕ್ಕೆ ಭೇಟಿ ನೀಡಿದ್ದು, ಆಗ ಬ್ರೆಝಿಲ್‌ಗೆ ತೆರಳಿ ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಜಾಗತಿಕ ಮಟ್ಟದಲ್ಲಿ ಕೊರೋನ ಬಿಕ್ಕಟ್ಟಿನಿಂದಾಗಿ ಈ ವರ್ಷ ಪ್ರಧಾನಿ ವಿದೇಶ ಪ್ರಯಾಣ ಕೈಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News