ಮಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರುವ ಕುರಿತು ದುಂಡು ಮೇಜಿನ ಸಭೆ

Update: 2020-09-22 15:34 GMT

ಮಂಗಳೂರು, ಸೆ.22: ಖಾಸಗಿ ಆಸ್ಪತ್ರೆ ನಿಯಂತ್ರಿಸುವುದು, ಸರಕಾರಿ ಆಸ್ಪತ್ರೆ ಬಲಪಡಿಸುವುದು, ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವುದು ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ಕುರಿತು ದುಂಡು ಮೇಜಿನ ಸಭೆಯಲ್ಲಿ ದೀರ್ಘ ಚರ್ಚೆ ನಡೆಸುವ ಮೂಲಕ ರಾಜ್ಯ ಸರಕಾರದ ಗಮನ ಸೆಳೆಯಲು ಯತ್ನಿಸಲಾಯಿತು.

ನಗರದ ಕೊಡಿಯಾಲ್‌ಬೈಲ್‌ನ ಸಿಬಿಇಯು ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ಸೇರಿದಂತೆ ಸಮಾನ ಮನಸ್ಕ ಸಂಘಟನೆಗಳಿಂದ ಮಂಗಳವಾರ ನಡೆದ ದುಂಡು ಮೇಜಿನ ಸಭೆಯಲ್ಲಿ ಭಾರೀ ಚರ್ಚೆ ನಡೆಯಿತು.

ಆರೋಗ್ಯ ಪ್ರತಿಯೊಬ್ಬ ನಾಗರಿಕನ ಹಕ್ಕು. ಆದರೆ, ಕಳೆದ ಮೂರು ದಶಕಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರೀಕರಣಕ್ಕೆ ಅನುವು ಮಾಡಿಕೊಟ್ಟಿರುವುದು ವ್ಯಾಪಕ ಪರಿಣಾಮ ಬೀರಿದೆ. ಸೇವೆಯ ಹೆಸರಿನಲ್ಲಿ ತೆರೆಯಲ್ಪಡುತ್ತಾ ಬಂದ ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಖಾಸಗಿ ಆಸ್ಪತ್ರೆಗಳು ಕ್ರಮೇಣ ಮುಕ್ತ ವ್ಯಾಪಾರದಲ್ಲಿ ತೊಡಗಿವೆ. ಜೊತೆಗೆ ಸಾರ್ವಜನಿಕ ಆರೋಗ್ಯ ಸೇವೆಯನ್ನು ಸರಕಾರಗಳು ಕಡೆಗಣಿಸುತ್ತಿರುವುದು ಆಘಾತಕಾರಿ ಎನ್ನುವುದು ದುಂಡುಮೇಜಿನ ಸಭೆಯಲ್ಲಿ ವ್ಯಾಪಕವಾಗಿ ಚರ್ಚೆಗೊಳಗಾಯಿತು.

ತಜ್ಞ ವೈದ್ಯರ ಸಹಿತ ಮೂಲಭೂತ ಸೌಲಭ್ಯಗಳ ಕೊರತೆ, ಗುಣಮಟ್ಟದ ಚಿಕಿತ್ಸೆಗಳು ಲಭ್ಯವಿಲ್ಲದಿರುವುದು, ಔಷಧ ಅಲಭ್ಯತೆಯು ಸರಕಾರಿ ಆಸ್ಪತ್ರೆಗಳಿಂದ ಜನರನ್ನು ದೂರ ಸರಿಸಿದೆ. ಸರಕಾರಿ ವೈದ್ಯಕೀಯ ಸೇವೆಗಳಿಗೆ ಸಂಬಂಧಿಸಿ ಸರಕಾರವೇ ರೂಪಿಸಿದ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಕರ್ನಾಟಕ ವೈದ್ಯಕೀಯ ಅಧಿನಿಯಮದ ಪ್ರಕಾರವೇ ಪ್ರತಿ 25,000 ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, 75,000 ಜನಸಂಖ್ಯೆ ಅಥವಾ ಹೋಬಳಿ ಕೇಂದ್ರವೊಂದಕ್ಕೆ 40 ಹಾಸಿಗೆಗಳ ಸಮುದಾಯ ಆಸ್ಪತ್ರೆ, ಪ್ರತಿ ತಾಲೂಕಿಗೊಂದು 100 ಹಾಸಿಗೆಗಳ ಪೂರ್ಣ ಪ್ರಮಾಣದ ಆಸ್ಪತ್ರೆ, ಅದರ ಮೇಲೆ ಜಿಲ್ಲಾಸ್ಪತ್ರೆ ಇರಬೇಕು. ಜೊತೆಗೆ ಅದಕ್ಕೆ ತಕ್ಕುದಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎನ್ನುವುದು ಕಾನೂನಿನಲ್ಲಿದೆ. ಇನ್ನು ಸರಕಾರವೂ ಆರೋಗ್ಯದ ಸ್ಕೀಂಗಳು, ಇನ್ಸೂರೆನ್ಸ್ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಖಜಾನೆಯಿಂದ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಇದರಿಂದಾಗಿ ಸರಕಾರಿ ಆಸ್ಪತ್ರೆಗಳು ಸೊರಗಿ ಖಾಸಗಿ ಆಸ್ಪತ್ರೆಗಳು ದಷ್ಟಪುಷ್ಟವಾಗಿ ಬೆಳೆಯುತ್ತಿವೆ. ಎಂಟು ತಾಲೂಕು, ಸುಮಾರು 25 ಲಕ್ಷ ಜನಸಂಖ್ಯೆಯಳ್ಳ ದಕ್ಷಿಣ ಕನ್ನಡ ಜಿಲ್ಲೆ ಕೇವಲ ನಾಲ್ಕು ತಾಲೂಕು ಮಟ್ಟದ ಆಸ್ಪತ್ರೆ, ಎಂಟು ಸಮುದಾಯ ಆಸ್ಪತ್ರೆಗಳನ್ನು ಮಾತ್ರ ಹೊಂದಿದೆ. ಮಂಜೂರಾದ 1,800 ಹುದ್ದೆಗಳಲ್ಲಿ ಅರ್ಧದಷ್ಟು ಖಾಲಿ ಬಿದ್ದಿವೆ. ಕೊರೋನ ಸಂದರ್ಭವಂತೂ ಅರೋಗ್ಯ ವ್ಯಾಪಾರೀಕರಣದ ಘೋರ ಪರಿಣಾಮ ಪೂರ್ಣ ಪ್ರಮಾಣದಲ್ಲಿ ಬಯಲಾಗಿಸಿದೆ. ಜನತೆ ಅಸಹಾಯಕತೆಯಿಂದ ನರಳುವಂತಾಗಿದೆ. ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಪಾವತಿಸಲು ಸಾರ್ವಜನಿಕವಾಗಿ ದೇಣಿಗೆ ಸಂಗ್ರಹಿಸುವ ಹೀನ ಸ್ಥಿತಿಗೆ ಜನತೆಯನ್ನು ದೂಡಲಾಗಿದೆ ಎನ್ನುವುದನ್ನು ಸಮಾನ ಮನಸ್ಕ ಸಂಘಟನೆಯ ಮುಖಂಡರು ಸಭೆಯಲ್ಲಿ ಉಲ್ಲೇಖಿಸಿದರು.

ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಬಳಸಿಕೊಂಡು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಉತ್ತಮ ಅವಕಾಶ ಇದ್ದರೂ ಅದಕ್ಕೆ ಬದಲಾಗಿ ವೆನ್ಲಾಕ್‌ನ್ನು ಕ್ಲಿನಿಕಲ್ ಕಲಿಕೆಗೆ ಬಳಸಿಕೊಂಡು ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಖಾಸಗಿಗೆ ನೀಡಲಾಯಿತು. ಜಿಲ್ಲೆಯೊಂದರಲ್ಲೇ ಎಂಟು ಮೆಡಿಕಲ್ ಕಾಲೇಜುಗಳಿವೆ. ಈ ಕಾಲೇಜುಗಳು ಮೆಡಿಕಲ್ ಸೀಟುಗಳಿಗೆ ಸಾಮಾನ್ಯರ ಮಕ್ಕಳಿಗೆ ಎಟುಕದಷ್ಟು ದುಬಾರಿ ಶುಲ್ಕ ವಿಧಿಸುತ್ತಿವೆ. ಈ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯೂ ದುಬಾರಿ. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೊಂಡರೆ ಕಡಿಮೆ ದರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಪ್ರಬಲ ಧ್ವನಿ ಜಿಲ್ಲೆಯಲ್ಲಿ ಎದ್ದು ಬರಬೇಕಿದೆ ಎನ್ನುವ ಅಂಶವು ಸಭೆಯಲ್ಲಿ ಪ್ರತಿಧ್ವನಿಸಿತು.

ಕೊರೋನ ಸೋಂಕು ಇಡೀ ಜಗತ್ತಿನಲ್ಲಿ ತುರ್ತುಸ್ಥಿತಿ ನಿರ್ಮಿಸಿದೆ. ದೇಶ ಅತ್ಯಂತ ಹೆಚ್ಚು ಬಾಧೆಗೊಳಗಾಗಿದೆ. ಆರ್ಥಿಕವಾಗಿ ಹಿಂದುಳಿದವರೇ ಬಹುಸಂಖ್ಯೆಯಲ್ಲಿ ರುವ ನಮ್ಮ ಸಮಾಜದಲ್ಲಿ ತಾರತಮ್ಯವಿಲ್ಲದ, ಗುಣಮಟ್ಟದ ಕೊರೋನ ಚಿಕಿತ್ಸೆ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ದೊರಕಬೇಕಿತ್ತು. ಆದರೆ, ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ವಿವಿಧ ಹಂತದ ಕೊರೋನ ಚಿಕಿತ್ಸೆಗೆ ದಿನವೊಂದಕ್ಕೆ 10 ಸಾವಿರದಿಂದ 25 ಸಾವಿರ ರೂ.ವರೆಗೆ ದುಬಾರಿ ದರ ನಿಗದಿ ಪಡಿಸಿತು. ಆದಾಗ್ಯೂ, ಖಾಸಗಿ ಆಸ್ಪತ್ರೆಗಳು ಈ ದರ ನಿಯಮ ಮೀರಿ ವಿಪರೀತ ದರ ವಿಧಿಸುತ್ತಿವೆ. ಅನಗತ್ಯ ದುಬಾರಿ ಔಷಧಿ ಬಳಸುತ್ತಿವೆ. ಸರಕಾರವೇ ಖಾಸಗಿ ಆಸ್ಪತ್ರೆ ಗಳಿಗೆ ಅಂಕುಶ ಹಾಕಬೇಕು ಎನ್ನುವ ಆಗ್ರಹವು ಸಭೆಯಲ್ಲಿ ಕೇಳಿಬಂತು.

ಆಡಳಿತ ಪಕ್ಷದ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು, ಅಧಿಕಾರಿಗಳು ಇಂತಹ ಆಸ್ಪತ್ರೆಗಳ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಜಿಲ್ಲಾಡಳಿತ ಖಾಸಗಿ ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆಗಳ ಹಿಡಿತದಲ್ಲಿ ಸಿಲುಕಿರುವಂತೆ ವರ್ತಿಸುತ್ತಿದೆ. ಇದರಿಂದ ಜನತೆ ಕೊರೋನ ಸೋಂಕು ಲಕ್ಷಣ ಕಂಡು ಬಂದರೂ ಆಸ್ಪತ್ರೆಗಳಿಗೆ ತೆರಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಇದು ಕೊರೋನ ಸೋಂಕಿನ ಪರಿಸ್ಥಿತಿ ಬಿಗಡಾಯಿಸಿ, ಸಾವು-ನೋವು ಹೆಚ್ಚಳಕ್ಕೆ ಕಾರಣವಾಗಲಿದೆ ಎನ್ನುವುದನ್ನು ದುಂಡುಮೇಜಿನ ಸಭೆಯು ರಾಜ್ಯ ಸರಕಾರವನ್ನು ಬಡಿದೆಬ್ಬಿಸಲು ಯತ್ನಿಸಿತು.

ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ನಿಯಂತ್ರಣ, ಸರಕಾರಿ ಆಸ್ಪತ್ರೆಗಳನ್ನು ನಿಯಮದಂತೆ ಎಲ್ಲ ಹಂತಗಳಲ್ಲಿ ಬಲಪಡಿಸುವುದು, ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವುದು, ವೆನ್ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವುದು, ಪೂರ್ಣ ಪ್ರಮಾಣದ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಸೇರಿದಂತೆ, ಕೊರೋನ ಚಿಕಿತ್ಸೆಯಲ್ಲಿ ನಿಯಮ ಉಲ್ಲಂಘಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ, ಗುಣಮಟ್ಟದ ಉಚಿತ ಕೊರೋನ ಚಿಕಿತ್ಸೆಗೆ ಸಮಾನ ಮನಸ್ಕ ಸಂಘಟನೆಗ ಪ್ರಮುಖರ, ಸಾಮಾಜಿಕ ಕಾರ್ಯಕರ್ತರು ಸಭೆಯಲ್ಲಿ ಆಗ್ರಹಿಸಿದರು.

ಸಭೆಯ ಅದ್ಯಕ್ಷತೆಯನ್ನು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ವಹಿಸಿದ್ದರು. ಸಭೆಯಲ್ಲಿ ಹಿರಿಯ ವೈದ್ಯ ಡಾ.ಶ್ರೀನಿವಾಸ್ ಕಕ್ಕಿಲಾಯ, ಡಿಎಸ್‌ಎಸ್ ಮುಖಂಡರಾದ ಎಂ.ದೇವದಾಸ್, ಸಾಮಾಜಿಕ ಮುಖಂಡರಾದ ಎಂ.ಜಿ. ಹೆಗಡೆ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್‌ಬೈಲ್, ಪುರುಷೋತ್ತಮ ಚಿತ್ರಾಪುರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್, ಫಾರೂಕ್ ಉಳ್ಳಾಲ್, ನ್ಯಾಯವಾದಿಗಳಾದ ದಿನೇಶ್ ಹೆಗ್ಡೆ ಉಳೇಪಾಡಿ, ದಯಾನಾಥ್ ಕೋಟ್ಯಾನ್, ಯಶವಂತ ಮರೋಳಿ, ರಾಮಚಂದ್ರ ಬಬ್ಬುಕಟ್ಟೆ, ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಸಿಪಿಐಎಂ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ರೈತ ಮುಖಂಡ ಕೆ.ಯಾದವ ಶೆಟ್ಟಿ, ಸಿಪಿಐ ಮುಖಂಡರಾದ ಎಚ್.ವಿ. ರಾವ್, ಕರುಣಾಕರ್, ಎಐವೈಎಫ್ ಮುಖಂಡ ಸೀತಾರಾಮ್ ಬೇರಿಂಜೆ, ರೋಸ್ವಾಲ್ಡ್ ಫೆರ್ನಾಂಡೀಸ್, ಸಮುದಾಯ ಮುಖಂಡರಾದ ವಾಸುದೇವ ಉಚ್ಚಿಲ, ಮನೋಜ್ ವಾಮಂಜೂರು, ದಲಿತ ಹಕ್ಕುಗಳ ಹೋರಾಟ ಸಮಿತಿ ಮುಖಂಡರಾದ ಕೃಷ್ಣ ತಣ್ಣೀರುಬಾವಿ, ತಿಮ್ಮಯ್ಯ ಕೊಂಚಾಡಿ, ಆಶಾ ಬೋಳೂರು, ಅಸುಂತ ಡಿಸೋಜ, ಎಸ್‌ಎಫ್‌ಐ ಮುಖಂಡರಾದ ಮಾಧುರಿ ಬೋಳಾರ್, ಪ್ರಮಿಳಾ ದೇವಾಡಿಗ, ಡಿವೈಎಫ್‌ಐ ಜಿಲ್ಲಾದ್ಯಕ್ಷ ಬಿ.ಕೆ. ಇಮ್ತಿಯಾಝ್, ಅಶ್ರಫ್ ಕೆಸಿರೋಡ್, ನಿತಿನ್ ಕುತ್ತಾರ್, ಚರಣ್ ಶೆಟ್ಟಿ, ರಫೀಕ್ ಹರೇಕಳ ಮುಂತಾದವರು ಉಪಸ್ಥಿತರಿದ್ದರು. ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿದರು.

ದುಂಡುಮೇಜಿನ ಸಭೆಯ ನಿರ್ಣಯಗಳು

* ಜಿಲ್ಲಾ ಆರೋಗ್ಯ ನಿಯಂತ್ರಣ ಪ್ರಾಧಿಕಾರದ ಸಭೆ ಜಿಲ್ಲಾಧಿಕಾರಿ ತಕ್ಷಣ ಕರೆಯುವುದು
* ಖಾಸಗಿ ಆಸ್ಪತ್ರೆಗಳು ವಿಧಿಸುವ ನಿಯಮ ಬಾಹಿರ ದುಬಾರಿ ಬಿಲ್ ವಿರುದ್ಧ ಕ್ರಮಕ್ಕೆ ಆಗ್ರಹ
 * ಕೊರೋನ ಸೋಂಕಿತನಿಗೆ ಗುಣಮಟ್ಟದ ಉಚಿತ ಚಿಕಿತ್ಸೆ ಒದಗಿಸುವುದು
* ಸರಕಾರದ ವೈದ್ಯಕೀಯ ಅಧಿನಿಯಮದ ಪ್ರಕಾರ ದೊರಕಬೇಕಾದಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆ, ತಾಲೂಕು ಮಟ್ಟದ ಆಸ್ಪತ್ರೆ ತೆರೆಯಲು ಕ್ರಮ
* ಜಿಲ್ಲಾಸ್ಪತ್ರೆ ವೆನ್ಲಾಕ್‌ನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವುದು
* ಜಿಲ್ಲೆಯಲ್ಲಿ ಸುಸಜ್ಜಿತ ಸರಕಾರಿ ಕ್ಯಾನ್ಸರ್ ಆಸ್ಪತ್ರೆ ತೆರೆಯುವುದು
* ಸರಕಾರಿ ಮೆಡಿಕಲ್ ಕಾಲೇಜು ತೆರೆಯುವುದು
* ಆರೋಗ್ಯ ಇಲಾಖೆಯಲ್ಲಿ ಖಾಲಿ ಉಳಿದ 900 ಹುದ್ದೆ ಭರ್ತಿ
* ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಜನಾಂದೋಲನ
* ಪ್ರಥಮ ಹಂತದಲ್ಲಿ ಜಿಲ್ಲೆಯ ಎಲ್ಲ ಎಂಟು ಶಾಸಕರ ಕಚೇರಿಗಳ ಮುಂಭಾಗ ಧರಣಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News