ಭಾರತ-ಚೀನಾ ಸೇನಾ ಮಾತುಕತೆ: ಲಡಾಖ್‌ನಲ್ಲಿ ಉದ್ವಿಗ್ನತೆ ಶಮನಕ್ಕೆ ಗಮನ

Update: 2020-09-22 17:09 GMT

ಹೊಸದಿಲ್ಲಿ, ಸೆ. 22: ಭಾರತ ಮತ್ತು ಚೀನಾ ಸೇನೆಗಳ ನಡುವಿನ ಆರನೇ ಸುತ್ತಿನ ಮಾತುಕತೆಯು ಸೋಮವಾರ 14 ಗಂಟೆಗಳ ಕಾಲ ನಡೆಯಿತು. ಮುಂಬರುವ ಭೀಕರ ಚಳಿಗಾಲದ ಹಿನ್ನೆಲೆಯಲ್ಲಿ, ಪೂರ್ವ ಲಡಾಖ್‌ನಲ್ಲಿರುವ ಅತಿ ಎತ್ತರದ ಸಂಘರ್ಷ ಸ್ಥಳಗಳಲ್ಲಿ ನೆಲೆಸಿರುವ ಉದ್ವಿಗ್ನತೆಯನ್ನು ಶಮನಗೊಳಿಸುವ ವಿಧಾನಗಳ ಬಗ್ಗೆ ಮಾತುಕತೆಯಲ್ಲಿ ಹೆಚ್ಚಿನ ಗಮನ ನೀಡಲಾಯಿತು ಎಂದು  ಮೂಲಗಳು ಮಂಗಳವಾರ ತಿಳಿಸಿವೆ.

ಈ ಸುದೀರ್ಘ ಮಾತುಕತೆಯ ಫಲಿತಾಂಶದ ಬಗ್ಗೆ ತಕ್ಷಣಕ್ಕೆ ಗೊತ್ತಾಗಿಲ್ಲ. ಆದರೆ, ಮಾತುಕತೆಗಳನ್ನು ಮುಂದುವರಿಸಲು ಇನ್ನೊಂದು ಸುತ್ತಿನ ಸಭೆ ನಡೆಸಲು ಉಭಯ ಬಣಗಳು ಒಪ್ಪಿಕೊಂಡಿವೆ ಎಂದು ತಿಳಿದುಬಂದಿದೆ.

ಎಲ್ಲ ಸಂಘರ್ಷ ಸ್ಥಳಗಳಿಂದ ಚೀನಾ ಸೈನಿಕರು ಶೀಘ್ರವಾಗಿ ಹಾಗೂ ಸಂಪೂರ್ಣವಾಗಿ ವಾಪಸಾಗಬೇಕು ಎಂಬುದಾಗಿ ಭಾರತೀಯ ತಂಡ ಚೀನಾವನ್ನು ಒತ್ತಾಯಿಸಿತು ಹಾಗೂ ಉದ್ವಿಗ್ನತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಗಳನ್ನು ಚೀನಾ ಇಡಬೇಕಾಗಿದೆ ಎಂದು ಭಾರತೀಯ ತಂಡ ಪ್ರತಿಪಾದಿಸಿತು ಎಂದು ಸರಕಾರದ ಮೂಲಗಳು ತಿಳಿಸಿವೆ. ಭಾರತ ಮತ್ತು ಚೀನಾಗಳ ನಡುವೆ ಸೆಪ್ಟಂಬರ್ 10ರಂದು ಏರ್ಪಟ್ಟ 5-ಅಂಶಗಳ ಒಪ್ಪಂದವನ್ನು ಜಾರಿಗೊಳಿಸುವ ಬಗ್ಗೆ ಉಭಯ ದೇಶಗಳ ನಿಯೋಗಗಳು ವಿವರವಾಗಿ ಚರ್ಚಿಸಿದವು.

ಮಾಸ್ಕೋದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಸಭೆಯ ನೇಪಥ್ಯದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾ ವಿದೇಶ ಸಚಿವ ವಾಂಗ್ ಯಿ ನಡುವೆ ನಡೆದ ಮಾತುಕತೆಗಳ ವೇಳೆ ಅಂತಿಮಗೊಳಿಸಲಾದ ಒಪ್ಪಂದವನ್ನು ಸಮಯ ಮಿತಿಗೆ ಒಳಪಟ್ಟು ಜಾರಿಗೊಳಿಸಬೇಕು ಎಂಬುದಾಗಿ ಭಾರತೀಯ ತಂಡ ಒತ್ತಾಯಿಸಿತು ಎಂಬುದಾಗಿಯೂ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News