1 ಕೋಟಿಗೂ ಅಧಿಕ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಾಯ್ನಾಡಿಗೆ ಹಿಂದಿರುಗಿದ್ದರು: ಕೇಂದ್ರ

Update: 2020-09-22 17:26 GMT

ಹೊಸದಿಲ್ಲಿ, ಸೆ. 22: ಕೊರೋನ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಘೋಷಿಸಲಾದ ಲಾಕ್‌ಡೌನ್ ಸಂದರ್ಭ 2020 ಮಾರ್ಚ್‌ನಿಂದ ಜೂನ್ ವರೆಗೆ 1 ಕೋಟಿಗೂ ಅಧಿಕ ವಲಸೆ ಕಾರ್ಮಿಕರು ತಾಯ್ನಾಡಿನಲ್ಲಿರುವ ತಮ್ಮ ಮನೆಗಳಿಗೆ ಕಾಲ್ನಡಿಗೆಯಲ್ಲಿ ಹಿಂದಿರುಗಿದ್ದಾರೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಕೊರೋನ ನಿಯಂತ್ರಿಸಲು ಘೋಷಿಸಲಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ತಾಯ್ನಾಡಿನಲ್ಲಿರುವ ತಮ್ಮ ಮನೆಗಳಿಗೆ ಮರಳಿದರು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಯ ಖಾತೆಯ ಸಹಾಯಕ ಸಚಿವ ವಿ.ಕೆ. ಸಿಂಗ್ ಲಿಖಿತ ಪ್ರತಿಕ್ರಿಯೆಯಲ್ಲಿ ಲೋಕಸಭೆಗೆ ತಿಳಿಸಿದರು.

ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ಸಂಗ್ರಹಿಸಿದ ದತ್ತಾಂಶದ ಪ್ರಕಾರ, ಲಾಕ್‌ಡೌನ್ ಸಂದರ್ಭ ಕಾಲ್ನಡಿಗೆಯಲ್ಲಿ ಪ್ರಯಾಣಿಸಿದವರು ಸೇರಿದಂತೆ 1.06 ಕೋಟಿಗೂ ಅಧಿಕ ವಲಸೆ ಕಾರ್ಮಿಕರು ತಮ್ಮ ತಾಯ್ನಾಡಿನಲ್ಲಿರುವ ಮನೆಗಳಿಗೆ ಹಿಂದಿರುಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ದತ್ತಾಂಶದ ಪ್ರಕಾರ 2020ರ ಮಾರ್ಚ್‌ನಿಂದ ಜೂನ್ ವರೆಗಿನ ಅವಧಿಯಲ್ಲಿ ರಸ್ತೆಗಳಲ್ಲಿ (ರಾಷ್ಟ್ರೀಯ ಹೆದ್ದಾರಿ ಸೇರಿದಂತೆ) 81,385 ಅಪಘಾತಗಳು ಸಂಭವಿಸಿವೆ ಎಂದು ಅವರು ಸಂಸತ್ತಿಗೆ ಮಾಹಿತಿ ನೀಡಿದರು. ಆದರೆ, ಲಾಕ್‌ಡೌನ್ ಸಂದರ್ಭ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಬಗ್ಗೆ ಪ್ರತ್ಯೇಕ ದತ್ತಾಂಶವನ್ನು ಸಚಿವಾಲಯ ನಿರ್ವಹಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ವಲಸೆ ಕಾರ್ಮಿಕರಿಗೆ ವಸತಿ, ಆಹಾರ, ನೀರು, ಆರೋಗ್ಯ ಸೌಲಭ್ಯಗಳು ಹಾಗೂ ಸೂಕ್ತ ಸಮಾಲೋಚನೆ ಒದಗಿಸಲು ಎಲ್ಲ ಅಗತ್ಯದ ಕ್ರಮಗಳನ್ನು ಕೈಗೊಳ್ಳಲು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಖಾತೆ ನಿರಂತರ ಸಲಹೆಗಳನ್ನು ನೀಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News