ಕೇಂದ್ರ, ರಾಜ್ಯ ಸರಕಾರಕ್ಕೆ ಮದ್ರಾಸ್ ಹೈಕೋರ್ಟ್ ನೋಟಿಸ್

Update: 2020-09-22 17:22 GMT

 ಚೆನ್ನೈ, ಸೆ. 22: ಸ್ಥಳೀಯ ಸಂಸ್ಥೆಗಳ ನೈರ್ಮಲ್ಯ ಕಾರ್ಮಿಕರಿಗೆ ವಸತಿ ಸೌಲಭ್ಯ ಸಹಿತ ಕನಿಷ್ಠ ವೇತನ, ಅಪಾಯ ಭತ್ಯೆ, ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಕೋರಿ ಸಲ್ಲಿಸಲಾದ ಮನವಿ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿ ಮದ್ರಾಸ್ ಉಚ್ಚ ನ್ಯಾಯಾಲಯ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಭಾರತದಲ್ಲಿ ಸ್ವಚ್ಛತೆ ಹೆಸರಲ್ಲಿ ಚರಂಡಿ ಹಾಗೂ ಮಲಗುಂಡಿಗಳನ್ನು ಸ್ವಚ್ಛಗೊಳಿಸುತ್ತಿರುವ ನೈರ್ಮಲ್ಯ ಕಾರ್ಮಿಕರು ಹಾಗೂ ಮಲ ಹೊರುವವರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಪಾದಿಸಿ ಕೊಯಂಬತ್ತೂರಿನ ವಕೀಲ ಎನ್. ಪನ್ನೀರ್‌ಸೆಲ್ವಂ ಅವರು ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎಂ.ಎಂ ಸುಂದರೇಶ್ ಹಾಗೂ ಆರ್. ಹೇಮಲತಾ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ಈ ನೋಟಿಸ್ ಜಾರಿ ಮಾಡಿದೆ. ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗ ಸಂಗ್ರಹಿಸಿದ ದತ್ತಾಂಶದ ಪ್ರಕಾರ 2017ರಿಂದ ಭಾರತದಲ್ಲಿ ಚರಂಡಿ ಹಾಗೂ ಮಲಗುಂಡಿಯನ್ನು ಸ್ವಚ್ಛಗೊಳಿಸುವ ಸಂದರ್ಭ ಪ್ರತಿ 5 ದಿನಕ್ಕೊಮ್ಮೆ ಓರ್ವ ನೈರ್ಮಲ್ಯ ಕಾರ್ಮಿಕ ಸಾವನ್ನಪ್ಪುತ್ತಿದ್ದಾರೆ.

ನೈರ್ಮಲ್ಯ ಕಾರ್ಮಿಕರು ಸಾವನ್ನಪ್ಪಲು ಮುಖ್ಯ ಕಾರಣ ಚರಂಡಿ ಅಥವಾ ಮಲಗುಂಡಿಗಳಲ್ಲಿ ಆಮ್ಲಜನಕದ ಕೊರತೆ ಹಾಗೂ ವಿಷಾನಿಲ ಇರುವುದು ಎಂದು ದೂರುದಾರರು ಹೇಳಿದ್ದಾರೆ. ತಮ್ಮ ಜೀವಕ್ಕೆ ಬೆಲೆ ನೀಡದೆ ಕಾರ್ಯ ನಿರ್ವಹಿಸುತ್ತಿರುವ ನೈರ್ಮಲ್ಯ ಕಾರ್ಮಿಕರು ರಾಜ್ಯದಲ್ಲಿ ತಿಂಗಳಿಗೆ ಕೇವಲ 2,100 ರೂಪಾಯಿ ವೇತನ ಪಡೆಯುತ್ತಾರೆ. ಅಂದರೆ ಪ್ರತಿ ದಿನ 80 ರೂಪಾಯಿ ವೇತನ. ಅಲ್ಲದೆ ಇವರೆಲ್ಲರೂ ಗುತ್ತಿಗೆ ಕಾರ್ಮಿಕರು. ಸ್ಥಳೀಯ ಆಡಳಿತದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿ ನೈರ್ಮಲ್ಯ ಕಾರ್ಮಿಕರಿಗೆ ಕನಿಷ್ಠ ವೇತನ, ಉತ್ತಮ ವಸತಿ ಸೌಲಭ್ಯ ಒದಗಿಸಬೇಕು. ಇದರೊಂದಿಗೆ ಅಪಾಯ ಭತ್ಯೆ ಕೂಡ ಒದಗಿಸಬೇಕು ಎಂದು ದೂರುದಾರರು ಹೇಳಿದ್ದಾರೆ. ದೂರುದಾರರ ಪ್ರತಿಪಾದನೆಯನ್ನು ಆಲಿಸಿದ ನ್ಯಾಯಾಲಯ ಅಕ್ಟೋಬರ್ 16ರ ಒಳಗೆ ವಿಸ್ತೃತ ವರದಿ ಸಲ್ಲಿಸುವಂತೆ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News