ಸುದರ್ಶನ್ ಟಿವಿ ಕಾರ್ಯಕ್ರಮದ ಸಂಹಿತೆ ಉಲ್ಲಂಘಿಸಿದೆ: ಸುಪ್ರೀಂಗೆ ಸಾಲಿಸಿಟರ್ ಜನರಲ್ ಮಾಹಿತಿ

Update: 2020-09-23 16:50 GMT

ಹೊಸದಿಲ್ಲಿ,ಸೆ.23: ನಾಗರಿಕ ಸೇವೆಗಳಲ್ಲಿ ‘ಮುಸ್ಲಿಮರ ಒಳನುಸುಳುವಿಕೆ’ ನಡೆಯುತ್ತಿದೆ ಎಂದು ಹೇಳಿಕೊಂಡು ಸುದರ್ಶನ್ ಟಿವಿ ಪ್ರಸಾರ ಮಾಡಿರುವ ವಿವಾದಾತ್ಮಕ ‘ಬಿಂದಾಸ್ ಬೋಲ್’ ಕಾರ್ಯಕ್ರಮ ಕೇಬಲ್ ಟಿವಿ ಕಾಯ್ದೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಹಾಗೂ ಈ ಸಂಬಂಧ ಟಿವಿ ವಾಹಿನಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರಕಾರವು ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

‘‘ ಸುದರ್ಶನ ಟಿವಿ ವಾಹಿನಿಗೆ ಬುಧವಾರ ಕೇಂದ್ರ ಸರಕಾರವು ನಾಲ್ಕು ಪುಟಗಳ ನೋಟಿಸ್ ನೀಡಿದೆ. ಟಿವಿ ಕಾರ್ಯಕ್ರಮ ಸಂಹಿತೆಯ ಉಲ್ಲಂಘನೆ ಆರೋಪದ ಕುರಿತು ಅದರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂಬ ಬಗ್ಗೆ ಸೆಪ್ಟೆಂಬರ್ 28ರಂದು ಸಂಜೆ 5ಕ್ಕೆ ಮುನ್ನ ಸುದರ್ಶನ್ ಟಿವಿಯು ಲಿಖಿತ ಉತ್ತರ ನೀಡಬೇಕಾಗಿದೆ ’’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ನೀಡಿರುವ ಈ ನೋಟಿಸ್‌ಗೆ ಸುದರ್ಶನ್ ಟಿವಿಯಿಂದ ಯಾವುದೇ ಉತ್ತರ ಬಾರದೇ ಇದ್ದಲ್ಲಿ, ಸರಕಾರವು ಏಕಪಕ್ಷೀಯವಾಗಿ ನಿರ್ಧಾರವನ್ನು ಕೈಗೊಳ್ಳಲಿದೆ ಎಂದವರು ಹೇಳಿದರು. ‘ಬಿಂದಾಸ್ ಬೋಲ್’ ಕಾರ್ಯಕ್ರಮವು ಟಿವಿ ಕಾರ್ಯಕ್ರಮ ಸಂಹಿತೆಗೆ ಅನುಗುಣವಾಗಿಲ್ಲವೆಂದು ಮೇಲ್ನೋಟಕ್ಕೆ ಕಂಡುಬಂದಿದೆಯೆಂದು ಕೇಂದ್ರ ಸರಕಾರವು ಅಭಿಪ್ರಾಯಿಸಿದೆ ಎಂದು ತುಷಾರ್ ಮೆಹ್ತಾ ತಿಳಿಸಿದರು.

 ಭಾರತೀಯ ನಾಗರಿಕ ಸೇವೆಗಳಲ್ಲಿ ಮುಸ್ಲಿಮರ ಒಳನುಸುಳುವಿಕೆಯಾಗುತ್ತಿದೆ ಎಂದು ಹೇಳಿಕೊಂಡು ಸುದರ್ಶನ್ ಟಿವಿ ‘ಯುಪಿಎಸ್‌ಸಿ ಜಿಹಾದ್’ ಎಂಬ ವಿವಾದಾತ್ಮಕ ಕಾರ್ಯಕ್ರಮವನ್ನು ಕಂತುಗಳಾಗಿ ಪ್ರಸಾರ ಮಾಡಿತ್ತು

ಕಾರ್ಯಕ್ರಮದ ಉಳಿದ 10 ಎಪಿಸೋಡ್‌ಗಳನ್ನು ಪ್ರಸಾರ ಮಾಡದಂತೆ ಸುಪ್ರೀಂಕೋರ್ಟ್ ಸೆಪ್ಟೆಂಬರ್ 15ರಂದು ತಡೆಯಾಜ್ಞೆ ವಿಧಿಸಿತ್ತು. ಈಗಾಗಲೇ ಸುದರ್ಶನ್ ಟಿವಿಯು ಈ ಕಾರ್ಯಕ್ರಮದ ನಾಲ್ಕು ಎಪಿಸೋಡ್‌ಗಳನ್ನು ಪ್ರಸಾರ ಮಾಡಿದೆ. ಈ ವಿವಾದಿತ ಟಿವಿ ಕಾರ್ಯಕ್ರಮವು ಪ್ರಸಾರವಾಗುವ ಮೊದಲೇ ಅದಕ್ಕೆ ತಡೆಯಾಜ್ಞೆ ಕೋರಿ ಕೆಲವರು ನ್ಯಾಯಾಲಯದ ಮೆಟ್ಟಲೇರಿದ್ದರು. ಆದಾಗ್ಯೂ ಸುಪ್ರೀಂಕೋರ್ಟ್ ಆಗಸ್ಟ್ 28ರಂದು ನೀಡಿದ ತೀರ್ಪಿನಲ್ಲಿ ಪ್ರಸಾರಕ್ಕೆ ಮುನ್ನವೇ ಟಿವಿ ಕಾರ್ಯಕ್ರಮವನ್ನು ನಿಷೇಧ ವಿಧಿಸಲು ನಿರಾಕರಿಸಿತ್ತು.

ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ಅವರ ಕೋರಿಕೆಯ ಮೇರೆಗೆ ಪ್ರಕರಣದ ಮುಂದಿನ ಆಲಿಕೆಯನ್ನು ನ್ಯಾಯಾಲಯವು ಅಕ್ಟೋಬರ್ 5ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News