17 ವರ್ಷ ಬದುಕನ್ನೇ ಹಾಳು ಮಾಡಿಕೊಂಡಿದ್ದೆ

Update: 2020-09-24 04:30 GMT

ಮಂಗಳೂರು, ಸೆ.24: ‘ಒಂದಲ್ಲ... ಎರಡಲ್ಲ... ಬರೋಬ್ಬರಿ 17 ವರ್ಷಗಳ ಕಾಲ ನಾನು ಗಾಂಜಾ ವ್ಯಸನಿಯಾಗಿದ್ದೆ. ಅಷ್ಟೇ ಅಲ್ಲ, ನನ್ನ ಯೌವನವನ್ನೇ ಹಾಳು ಮಾಡಿಕೊಂಡೆ. ಇಂತಹ ನಶೆಯ ಬದುಕು ನನ್ನ ಶತ್ರುವಿಗೂ ಬಾರದಿರಲಿ’...

ಇದು ಮಂಗಳೂರು ತಾಲೂಕಿನ ಕುಗ್ರಾಮವೊಂದರ ಬಡಕುಟುಂಬದಲ್ಲಿ ಹುಟ್ಟಿ ಬೆಳೆದ ವಿವಾಹಿತನೊಬ್ಬನ ಮನ ದಾಳದ ಮಾತು.

‘ವಾರ್ತಾಭಾರತಿ’ಯ ಜೊತೆ ಮಾತನಾಡಿದ ಶರೀಫ್ (ಹೆಸರು ಬದಲಿಸಲಾಗಿದೆ) ‘ನಾನು ಕೇವಲ 3ನೇ ತರಗತಿ ವರೆಗೆ ಕಲಿತಿದ್ದೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇತ್ತು. ಹಾಗಾಗಿ ಹೆಚ್ಚು ಕಲಿಯಲಾಗಲಿಲ್ಲ. ಊರಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡೆ. ಆದರೂ ದುಡಿದದ್ದು ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ಕೊನೆಗೆ ಕೆಲಸ ಅರಸಿಕೊಂಡೆ ಕೇರಳಕ್ಕೆ ಹೋದೆ. ಅಲ್ಲಿನ ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡಿಕೊಂಡೆ. ಆವಾಗಲೇ ನನಗೆ ಈ ಚಟ ಶುರುವಾಯಿತು.

ಅಲ್ಲಿ ಕೆಲಸ ಮಾಡಿಕೊಂಡಿರುವ ಬಹುತೇಕ ಮಂದಿ ಗಾಂಜಾ ಸೇವಿಸುತ್ತಿದ್ದರು. ನನಗೂ ಕುತೂಹಲವಾಯಿತು. ಸೇವಿಸಲು ಕೊಟ್ಟರು. ಆ ದಿನ ಮಾತ್ರವಲ್ಲ, ಮೂರ್ನಾಲ್ಕು ದಿನಗಳವರೆಗೂ ನನಗೆ ಯಾವುದೋ ಒಂದು ಲೋಕದಲ್ಲಿದ್ದ ಅನುಭವ. ನಾನೇನು ಎಂಬುದು ನನಗೇ ಗೊತ್ತಿಲ್ಲದಂತಹ ಸ್ಥಿತಿ. ಕೆಲಸವೂ ಬೇಡ, ಊಟ-ತಿಂಡಿಯೂ ಬೇಡ. ಗಾಂಜಾ ಸೇವಿಸಬೇಕು ಎಂಬ ಹಂಬಲ. ದುಡಿಯದಿದ್ದರೂ ಅವರಿ ವರಿಂದ ಕಾಡಿ ಬೇಡಿ ಗಾಂಜಾ ತರಿಸಿಕೊಳ್ಳುತ್ತಿದ್ದೆ. ನನಗೆ ಆಗಲೇ ಮದುವೆಯಾಗಿತ್ತು. ಒಂದು ಮಗುವೂ ಇತ್ತು. ಮನೆಯವರು ನನ್ನಿಂದ ಹಣವನ್ನು ನಿರೀಕ್ಷಿಸುತ್ತಿದ್ದರು. ಆದರೆ ನಾನಲ್ಲಿ ದುಡಿಯದೆ ಗಾಂಜಾ ವ್ಯಸನಿಯಾದೆ. ಅದನ್ನು ಸೇವಿಸಿದರೆ ಬೇರೆ ಯಾವುದೂ ಬೇಡ. ಎಲ್ಲಾದರೊಂದು ಮೂಲೆಯಲ್ಲಿ ಬಿದ್ದಿರು ಎಂದು ಮನಸು ಹೇಳುತ್ತಿತ್ತು. ದೇಹದಲ್ಲಿ ರಕ್ತವೇ ಸಂಚಲನವಾಗದಂತಹ ಅನುಭವ. ಕೆಲವೊಮ್ಮೆ ಗೆಳೆಯರ ಜೊತೆಗೂಡಿ ಕೆಟ್ಟ ಕೆಲಸ ಮಾಡೋಣ ಎಂದು ಅನಿಸುತ್ತಿತ್ತು.

ಇತ್ತ ಮನೆಯಿಂದ ತಂದೆ-ತಾಯಿ ‘ಒಂದೋ ಊರಿಗೆ ಬಾ ಅಥವಾ ಹಣ ಕಳುಹಿಸು’ ಎಂದು ಒತ್ತಾಯಿಸುತ್ತಿದ್ದರು. ಹೆಂಡತಿಯೂ ಕಷ್ಟ ಹೇಳುತ್ತಿದ್ದಳು. ಕೊನೆಗೆ ಊರಿಗೆ ಬಂದೆ. ಇಲ್ಲೂ ಕೆಲಸ ಮಾಡದೆ ಕಾಲಹರಣ ಮಾಡಿದೆ. ತಂದೆ-ತಾಯಿ-ಹೆಂಡತಿಗೂ ನಾನು ಗಾಂಜಾ ವ್ಯಸನಿ ಅಂತ ಗೊತ್ತಾಯಿತು. ಸ್ನೇಹಿತರಿಗೂ ತಿಳಿಯಿತು. ಎಲ್ಲರೂ ನನ್ನನ್ನು ಗೇಲಿ ಮಾಡತೊಡಗಿದರು. ಗಾಂಜಾದ ಅಮಲಿನಿಂದ ಕೆಲವರ ಜೊತೆ ಜಗಳ ಮಾಡಿದೆ. ಹೊಡೆದಾಟದಲ್ಲಿ ಪಾಲ್ಗೊಂಡೆ. ನಾಲ್ಕೈದು ಪ್ರಕರಣವೂ ನನ್ನ ಮೇಲೆ ದಾಖಲಾಯಿತು. ಪೊಲೀಸ್ ಠಾಣೆ, ಕೋರ್ಟ್, ಕಚೇರಿ ಅಂತ ಅಲೆದಾಡಿದೆ. ಬರೋಬ್ಬರಿ 17 ವರ್ಷಗಳ ಕಾಲ ಗಾಂಜಾದ ಅಮಲಿನಲ್ಲಿ ತೇಲಿ ಹೋದೆ. ಮಾಡಬಾರದ ಕೆಲಸ ಮಾಡಿದೆ. ಮೂರು ಮಕ್ಕಳಾದರೂ ಕೂಡ ನನಗೆ ಬುದ್ಧಿಬರಲಿಲ್ಲ. ಅದೊಂದು ದಿನ ರಾತ್ರಿ ಸುಮಾರು 12ರ ವೇಳೆಗೆ ನನಗೆ ನನ್ನ ತಂದೆ-ತಾಯಿ, ಹೆಂಡತಿ-ಮಕ್ಕಳು ಕಣ್ಮುಂದೆ ಬಂದಂತಾಯಿತು. ಗಾಂಜಾ ವ್ಯಸನದಿಂದಾಗಿ ನಾನು ನನ್ನ ಮನೆಯವರಿಗೆ, ಊರವರಿಗೆ ಬೇಡದವನಾಗಿದ್ದೇನೆ. ಹೇಗಾದರೂ ಮಾಡಿ ಇದರಿಂದ ದೂರ ಸರಿಯಬೇಕು ಎಂದು ನಿರ್ಧರಿಸಿದೆ. ಅಷ್ಟರಲ್ಲಿ ಸಂಘಟನೆಯೊಂದರ ಕಾರ್ಯಕರ್ತರು ನನಗೆ ಹಿತವಚನ ನೀಡತೊಡಗಿದರು. ‘ಧಾರ್ಮಿಕ ತರಗತಿ’ಗೆ ಆಹ್ವಾನಿಸಿದರು. ಮತ್ತೆ ಮಸೀದಿಗೆ ಕರೆದೊಯ್ದರು. ಹಾಗೇ ಗಾಂಜಾ ಸೇವಿಸುವುದನ್ನು ಬಿಟ್ಟು 6 ತಿಂಗಳಾದರೂ ಕೂಡ ಮತ್ತೆ ಮತ್ತೆ ಮನಸು ಅದರತ್ತ ಸೆಳೆಯುತ್ತಿತ್ತು. ಗಾಂಜಾ ಸೇವನೆಯಿಂದ ಸುಮಾರು 17 ವರ್ಷಗಳ ಕಾಲ ನಾನು ನನ್ನ ಬದುಕನ್ನು ಹಾಳುಗೆಡಹಿದ್ದು ಸಾಕು. ಇನ್ನು ಹೆಂಡತಿ-ಮಕ್ಕಳಿಗಾಗಿ ಅದರ ಸಹವಾಸ ಮಾಡವುದೇ ಬೇಡ ಎಂದು ನಿರ್ಧರಿಸಿದೆ. ಹಾಗೇ ಏನಾದರೊಂದು ಕೆಲಸ ಮಾಡ ತೊಡಗಿದೆ. ಗಾಂಜಾ ಸೇವನೆಯಿಂದ ಮುಕ್ತಿಗೊಂಡು 1 ವರ್ಷವಾದ ಬಳಿಕ ನನ್ನನ್ನು ಕಂಡು ದೂರ ಸರಿಯುತ್ತಿದ್ದ ಜನರು ಹತ್ತಿರವಾದರು. ಊರಿನ ಮಸೀದಿಯ ಆಡಳಿತ ಕಮಿಟಿಯ ಸದಸ್ಯನಾಗಲು ಅವಕಾಶ ಮಾಡಿಕೊಟ್ಟರು. ಈಗಲೂ ಕಮಿಟಿಯ ಸದಸ್ಯನಾಗಿದ್ದೇನೆ. ಅಷ್ಟೇ ಅಲ್ಲ ಸಮಾಜ ಸೇವೆ ಮಾಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಸಂಘಟನೆಯೊಂದರ ಅಧ್ಯಕ್ಷನನ್ನಾಗಿ ನನ್ನನ್ನು ಆಯ್ಕೆ ಮಾಡಿಕೊಂಡರು. ಈಗಲೂ ಆ ಸಂಘಟನೆಯ ಅಧ್ಯಕ್ಷನಾಗಿ ಸೇವೆ ಮಾಡುತ್ತಿದ್ದೇನೆ.

ನಾನು ಗಾಂಜಾ ವ್ಯಸನದಿಂದ ದೂರ ಸರಿಯಬಲ್ಲೆ ಎಂದು ನಿರೀಕ್ಷಿಸಿದವನಲ್ಲ. ಆದರೆ ನಾಲ್ಕು ವರ್ಷಗಳಿಂದ ಗಾಂಜಾ ಮುಕ್ತನಾದೆ. ನನಗೀಗ ಸ್ವಂತ ಮನೆ ಇಲ್ಲ. ಬಾಡಿಗೆ ಮನೆಯಲ್ಲಿ ವಾಸವಾಗಿರುವೆ. ಸ್ವಂತ ಮನೆಯಾಗಬೇಕು. ಮಕ್ಕಳನ್ನು ಕಲಿಸಬೇಕು ಎಂಬ ಆಸೆ ಇದೆ. ಆ ಆಸೆ ಪೂರ್ತಿಯಾಗಬಹುದು ಎಂಬ ವಿಶ್ವಾಸವಿದೆ. ನನಗೀಗ 39 ವರ್ಷ. ದುಡಿಯುವ ಕಸುಬನ್ನು ಈ ವ್ಯಸನದಿಂದ ಕಳಕೊಂಡೆ. ಹಾಗಾಗಿ ಯಾರೂ ಗಾಂಜಾ ವ್ಯಸನಿಯಾಬೇಡಿ. ಯವ್ವೌನ ಹಾಳು ಮಾಡಬೇಡಿ. ಇದು ನಿಮ್ಮಲ್ಲಿ ನನ್ನ ಮನವಿ.

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News