ಹಿರಿಯ ವಿದ್ವಾಂಸ, ಖಾಝಿ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಿಧನ

Update: 2020-09-24 05:57 GMT

ಮಂಗಳೂರು, ಸೆ. 24: ಹಿರಿಯ ವಿದ್ವಾಂಸ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಯುಕ್ತ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ (71) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷರಾಗಿದ್ದ ಬೇಕಲ್ ಉಸ್ತಾದ್ ಅವರು ಜಾಮಿಯಾ ಸಅದಿಯಾ ಅರಬಿಯಾ ಶರೀಅತ್ ಕಾಲೇಜಿನ ಪ್ರಾಚಾರ್ಯರು, ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರ ಸದಸ್ಯರಾಗಿ ಅಲ್ ಅನ್ಸಾರ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ದೇವಬಂದ್ ಅರಬಿಕ್ ಕಾಲೇಜಿನಿಂದ ಪದವಿ ಪಡೆದಿದ್ದ ಅವರು, ಸೂರಿಂಜೆ ಮತ್ತು ಬಂಟ್ವಾಳದ ಜುಮಾ ಮಸೀದಿಗಳಲ್ಲಿ ತಲಾ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಸುದೀರ್ಘ 43 ವರ್ಷಗಳಿಂದ ಬೇಕಲದಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುವ ಮೂಲಕ ‘ಬೇಕಲ್ ಉಸ್ತಾದ್’ ಎಂದೇ ಜನಪ್ರಿಯರಾಗಿದ್ದರು.

ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಫೂಡಲ್ ಎಂಬಲ್ಲಿನ ಮುಹಮ್ಮದ್ ಮತ್ತು ಖದೀಜಾ ದಂಪತಿಯ ಪುತ್ರನಾಗಿ 1949ರಲ್ಲಿ ಜನಿಸಿದ್ದ ಅವರು ನರಿಂಗಾನ ಗ್ರಾಮದ ಡಿಜಿ ಕಟ್ಟೆಯ ಶಾಲೆಯಲ್ಲಿ 7ನೆ ತರಗತಿ ಕಲಿತ ಬಳಿಕ ಧಾರ್ಮಿಕ ವಿದ್ಯಾಭ್ಯಾಸ ಕಲಿಯಲು ಆಸಕ್ತಿ ವಹಿಸಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗೆ ‘ತಾಜುಲ್ ಫುಖಹಾಅ್’ ಎಂಬ ಬಿರುದು ಪಡೆದಿದ್ದಾರೆ.

ಅವರು ಕರ್ಮಶಾಸ್ತ್ರ, ಖಗೋಳಶಾಸ್ತ್ರದ ಬಗ್ಗೆ ಉನ್ನತ ಜ್ಞಾನ ಹೊಂದಿದ್ದರು. ಸುನ್ನಿ ಜಂ ಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷರಾಗಿದ್ದರು. ಜಾಮಿಯಾ ಸಅದಿಯಾ ಅರಬಿಯಾ ಶರೀಅತ್ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರದ ಸದಸ್ಯರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News