ಇಂಡಿಯಾನ ಆಸ್ಪತ್ರೆ: ಹೃದಯ- ಶ್ವಾಸಕೋಶ ಸಮಸ್ಯೆಯ ಮಗುವಿಗೆ ಅಪರೂಪದ ಶಸ್ತ್ರ ಚಿಕಿತ್ಸೆ

Update: 2020-09-24 07:49 GMT

ಮಂಗಳೂರು, ಸೆ. 24: ಹುಟ್ಟಿನಿಂದಲೇ ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆ ಹೊಂದಿದ್ದ ಒಂದೂವರೆ ವರ್ಷದ ಹೆಣ್ಣು ಮಗುವೊಂದಕ್ಕೆ ಅಪರೂಪದ ಶಸ್ತ್ರ ಚಿಕಿತ್ಸೆ ಮೂಲಕ ಮರು ಜೀವ ನೀಡಲಾಗಿದೆ ಎಂದು ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಹೃದ್ರೋಗ ತಜ್ಞ ಡಾ. ಯೂಸುಫ್ ಕುಂಬ್ಳೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ಉಸಿರಾಟದ ತೊಂದರೆ ಹಾಗೂ ಶ್ವಾಸಕೋಶದ ರಕ್ತನಾಳಗಳ ತೊಂದರೆಯಿಂದ ಬಳಲುತ್ತಿದ್ದ ಮಗು ಆಸ್ಪತ್ರೆಗೆ ದಾಖಲಾದ ಸಂದರ್ಭ ವಯೋಸಹಜ ಬೆಳವಣಿಗೆಯಿಂದಲೂ ಕುಂಠಿತವಾಗಿತ್ತು ಎಂದರು.

ಟೋಟಲ್ ಅನೋಮಲಸ್ ಪಲ್ಮನರಿ ವೀನಸ್ ಕನೆಕ್ಷನ್ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿನ ದೇಹದ ರಕ್ತ ನೀಲಿಬಣ್ಣಕ್ಕೆ ತಿರುಗುತ್ತಿತ್ತು. ಹಲವು ವೈದ್ಯರ ಸಂಪರ್ಕದ ಬಳಿಕ ಆರ್ಥಿಕವಾಗಿಯೂ ಸಂಕಷ್ಟದಲ್ಲಿದ್ದ ಪೋಷಕರು ಮಗುವನ್ನು ಇಂಡಿಯಾನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಜುಲೈ ಕೊನೆಯ ವಾರದಲ್ಲಿ ಆಸ್ಪತ್ರೆಯಲ್ಲಿ ಮಗುವಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ವಿಧಾನದಲ್ಲಿ ಚಿಕಿತ್ಸೆ ನೀಡಲಾಯಿತು.

ಮೂರು ಗಂಟೆಗಳ ಶಸ್ತ್ರಚಿಕಿತ್ಸೆ ನಡೆದು ಒಂದು ವಾರದ ನಂತರ ಮಗು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದೆ. ಬಿಪಿಎಲ್ ಕಾರ್ಡ್ ಕೂಡಾ ಹೊಂದಿಲ್ಲದ ಮಗುವಿನ ಚಿಕಿತ್ಸೆಗೆ ಆಸ್ಪತ್ರೆಯ ಬಡ ಮತ್ತು ನಿರ್ಗತಿಕ ಜನರಿಗೆ ಸಹಾಯ ಮಾಡಲು ಸ್ಥಾಪಿಸಿದ ಟ್ರಸ್ಟ್ ಇಂಡಿಯಾನಾ ಫಾತಿಮಾ ಹೆಲ್ತ್ ಫೌಂಡೇಶನ್ ವತಿಯಿಂದ 1.5 ಲಕ್ಷ ರೂ. ಮೂಲಕ ಚಿಕಿತ್ಸೆ ವೆಚ್ಚವನ್ನು ಭರಿಸಲಾಗಿದೆ. ಮಕ್ಕಳ ಚಿಕಿತ್ಸೆ ವಿಭಾಗದ ಮಖ್ಯಸ್ಥರಾದ ಡಾ. ಅಲಿ ಕುಂಬ್ಳೆ, ನವಜಾತ ಶಿಸು ತಜ್ಞ ಡಾ. ಅಭಿಷೇಕ್, ಹೃದಯ ಶಸ್ತ್ರ ಚಿಕಿತ್ಸಕ ಡಾ. ಸಿದ್ಧಾರ್ಥ, ಹೃದಯ ಅರಿವಳಿಕೆ ತಜ್ಞ ಡಾ. ಮದನ್, ಮಕ್ಕಳ ಇಂಟೆನ್ಸಿವ್ ಕೇರ್ ತಜ್ಞ ಡಾ. ಅರುಣ್ ವರ್ಗೀಸ್‌ರವರ ತಂಡ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿತ್ತು ಎಂದು ಅವರು ವಿವರಿಸಿದರು.

ಗೋಷ್ಠಿಯಲ್ಲಿ ಡಾ. ಸಿದ್ಧಾರ್ಥ, ಡಾ. ಅರುಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News