ಉಪ್ಪಿನಂಗಡಿ : ಪತ್ನಿ, ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ ನಡೆಸಿದ ದುಷ್ಕರ್ಮಿ

Update: 2020-09-24 08:28 GMT

ಉಪ್ಪಿನಂಗಡಿ: ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಆಕೆಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ ಎನ್ನಲಾದ ಘಟನೆ ಉಪ್ಪಿನಂಗಡಿಯ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ಇಂದು ಮುಂಜಾನೆ ನಡೆದಿದ್ದು, ಘಟನೆಗೆ ಕೌಟುಂಬಿಕ ಕಲಹದ ಕಾರಣ ಎಂದು ತಿಳಿದುಬಂದಿದೆ. 

ಉಪ್ಪಿನಂಗಡಿಯ ನೆಲ್ಯಾಡಿ ನಿವಾಸಿ ಬಿಜು (38) ಎಂಬಾತ ತನ್ನ ಪತ್ನಿ ಶೈನಿ (33) ಹಾಗೂ ಪತ್ನಿಯ ಚಿಕ್ಕಮ್ಮ ಝಾನ್ಸಿ (36) ಎಂಬವರ ಮೇಲೆ ಆಸಿಡ್ ದಾಳಿ ನಡೆಸಿರುವುದಾಗಿ ದೂರಲಾಗಿದೆ. ಇದರ ಪರಿಣಾಮ ಇಬ್ಬರ ಮುಖ, ಕಣ್ಣಿನ ಭಾಗ ಸುಟ್ಟು ಹೋಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಇದೆ.

ಬಿಜು ಹಾಗೂ ಆತನ ಪತ್ನಿ ಶೈನಿ ನಡುವೆ ಮನಸ್ತಾಪವಿತ್ತು. ಹೀಗಾಗಿ ಶೈನಿ ಕೊಣಾಲು ಗ್ರಾಮದ ಪಾಂಡಿಬೆಟ್ಟುನಲ್ಲಿರುವ ತನ್ನ ತಂದೆಯ ತಮ್ಮನ ಮನೆಯಲ್ಲಿ ಮಗಳೊಂದಿಗೆ ವಾಸವಾಗಿದ್ದರು. ಶೈನಿ ತನ್ನ ಚಿಕ್ಕಮ್ಮ ಝಾನ್ಸಿ ಜೊತೆಗೆ ನೆಲ್ಯಾಡಿಯ ಆಶ್ರಮವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು.

ಎಂದಿನಂತೆ ಇಂದು ಕೂಡಾ ಬೆಳಗ್ಗೆ ಆರು ಗಂಟೆಯ ವೇಳೆಗೆ ಶೈನಿ ಹಾಗೂ ಆಕೆಯ ಚಿಕ್ಕಮ್ಮ ಝಾನ್ಸಿ ಕೆಲಸಕ್ಕೆ ಹೋಗಲೆಂದು ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾದು ಕುಳಿತಿದ್ದ ಆರೋಪಿ ಬಿಜು ಇಬ್ಬರ ಮೇಲೂ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News