3 ದಿನಗಳ ಮಳೆಗೆ ಮೆಸ್ಕಾಂಗೆ 42.15 ಲಕ್ಷ ರೂ. ನಷ್ಟ

Update: 2020-09-24 08:49 GMT

ಮಂಗಳೂರು, ಸೆ. 24: ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಸೆ.18ರಿಂದ ಸೆ.20ರವರೆಗೆ ಸುರಿದ ಧಾರಾಕಾರ ಗಾಳಿ-ಮಳೆ ಹಾಗೂ ಪ್ರವಾಹದಿಂದಾಗಿ ಮೆಸ್ಕಾಂಗೆ ಒಟ್ಟು 42.15 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

ಮೆಸ್ಕಾಂ ವ್ಯಾಪ್ತಿಯ ನಾಲ್ಕೂ ಜಿಲ್ಲೆಗಳಲ್ಲಿ ಮೂರು ದಿನದ ಮಳೆ ಗಾಳಿಯಿಂದಾಗಿ 27 ಪರಿವರ್ತಕಗಳಿಗೆ ಹಾನಿಯಾಗಿದ್ದರೆ, 221 ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಒಟ್ಟು 5.25 ಕಿ.ಮೀ. ವಿದ್ಯುತ್ ಮಾರ್ಗಗಳು ಹಾನಿಗೊಳಗಾಗಿವೆ. ದ.ಕ. ಜಿಲ್ಲೆಯಲ್ಲಿ 26.69 ಲಕ್ಷ ರೂ., ಉಡುಪಿ ಜಿಲ್ಲೆಯಲ್ಲಿ 9.93 ಲಕ್ಷ ರೂ., ಶಿವಮೊಗ್ಗ ಜಿಲ್ಲೆಯಲ್ಲಿ 1.93 ಲಕ್ಷ ರೂ. ಹಾಗೂ ಚಿಕ್ಕಮಗಳೂರಿನಲ್ಲಿ 3.60 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ದ.ಕ ಜಿಲ್ಲೆಯ 12 ಪರಿವರ್ತಕಗಳು, 100 ವಿದ್ಯುತ್ ಕಂಬಗಳು ಹಾಗೂ 1.26 ಕಿ.ಮೀ ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದ್ದು, ಒಟ್ಟು 26.69 ಲಕ್ಷ ರೂ. ನಷ್ಟ ಸಂಭವಿಸಿದೆ. ಇದೇ ವೇಳೆ ಈ ವರ್ಷ ಮಳೆಗಾಲ ಆರಂಭವಾದಾಗಿನಿಂದ ಗಾಳಿ, ಮಳೆ ಮತ್ತು ಪ್ರವಾಹದಿಂದ ಮೆಸ್ಕಾಂಗೆ ಒಟ್ಟು 2497 ಲಕ್ಷ ರೂ. ನಷ್ಟ ಉಂಟಾಗಿದೆ.

ಒಟ್ಟು 1011 ಪರಿವರ್ತಕಗಳು, 17231 ವಿದ್ಯುತ್ ಕಂಬಗಳಿಗೆ ಹಾಗೂ ಒಟ್ಟು 738.59 ಕಿ.ಮೀ ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 331 ಪರಿವರ್ತಕ, 5168 ವಿದ್ಯುತ್ ಕಂಬಗಳಿಗೆ ಹಾಗೂ 207.97 ಕಿ.ಮೀ ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

ಮೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಗ್ರಾಹಕರ ಸಹಕಾರದಿಂದ ವಿದ್ಯುತ್ ಪೂರೈಕೆಯಲ್ಲಿನ ಅಡಚಣೆಗಳನ್ನು ಸರಿಪಡಿಸುತ್ತಿದ್ದಾರೆ. ಇನ್ನೂ ಹಲವೆಡೆ ದುರಸ್ತಿ ಕಾರ್ಯಗಳು ಮುಂದುವರಿದಿದ್ದು, ಗ್ರಾಹಕರು ಸಹಕರಿಸಬೇಕು. ಹಾಗೂ ಕೋವಿಡ್ ಅವಧಿಯಲ್ಲೂ ಮೆಸ್ಕಾಂ ತನ್ನ ಗ್ರಾಹಕರಿಗೆ ಅಡಚಣೆ ರಹಿತ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಂಡಿದೆ. ಹಾಗಾಗಿ ವಿದ್ಯುತ್ ಶುಲ್ಕ ಪಾವತಿಸಲು ಬಾಕಿ ಇರುವ ಗ್ರಾಹಕರು ಸ್ವಯಂ ಪ್ರೇರಿತರಾಗಿ ವಿದ್ಯುತ್ ಬಿಲ್ ಪಾವತಿ ಸಹಕರಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ವರ್ಷದ ಮಳೆಗಾಲದಲ್ಲಿ ಮೆಸ್ಕಾಂಗೆ ಆಗಿರುವ ಒಟ್ಟು ನಷ್ಟ

ದಕ್ಷಿಣ ಕನ್ನಡ : 1068.35 ಲಕ್ಷ ರೂ.
ಉಡುಪಿ : 392.02 ಲಕ್ಷ ರೂ.
ಶಿವಮೊಗ್ಗ : 476.33 ಲಕ್ಷ ರೂ.
ಚಿಕ್ಕಮಗಳೂರು: 560.43 ಲಕ್ಷ ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News