ಹಿರಿಯಡ್ಕ ಪೇಟೆಯಲ್ಲಿ ರೌಡಿಶೀಟರ್‌ನ ಬರ್ಬರ ಹತ್ಯೆ : ಹಾಡಹಗಲೇ ದುಷ್ಕರ್ಮಿಗಳಿಂದ ಕೃತ್ಯ

Update: 2020-09-24 16:35 GMT

ಉಡುಪಿ, ಸೆ.24: ದುಷ್ಕರ್ಮಿಗಳ ತಂಡವೊಂದು ರೌಡಿ ಶೀಟರ್‌ನನ್ನು ಸಾರ್ವಜನಿಕವಾಗಿ ತಲವಾರುಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಿರಿಯಡ್ಕ ಪೇಟೆಯಲ್ಲಿ ಗುರುವಾರ ಅಪರಾಹ್ನ 2:25ರ ಸುಮಾರಿಗೆ ನಡೆದಿದೆ.

ಪಡುಬಿದ್ರಿ ಸಮೀಪದ ಇನ್ನಾ ಮಡ್ಮಣ್‌ಗುತ್ತು ನಿವಾಸಿ ಕಿಶನ್ ಹೆಗ್ಡೆ(34) ಕೊಲೆಯಾಗಿರುವ ರೌಡಿ ಶೀಟರ್. ಕಿಶನ್ ಹೆಗ್ಡೆ ಮಣಿಪಾಲ ಕಡೆಯಿಂದ ಹಿರಿಯಡ್ಕ ಕಡೆಗೆ ತನ್ನ  ಕಾರಿನಲ್ಲಿ ಇಬ್ಬರು ಗೆಳೆಯರೊಂದಿಗೆ ಹೋಗುತ್ತಿದ್ದಾಗ ನಾಲ್ಕೈದು ಮಂದಿ ದುಷ್ಕರ್ಮಿಗಳು ಹಿಂದಿನಿಂದ ಎರಡು ಕಾರಿನಲ್ಲಿ ಬೆನ್ನಟ್ಟಿ ಕೊಂಡು ಬಂದರೆನ್ನಲಾಗಿದೆ.
ಈ ಮಧ್ಯೆ ಚಲಿಸುತ್ತಿದ್ದ ಕಾರಿನ ಮೇಲೂ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮುಂದೆ ದುಷ್ಕರ್ಮಿಗಳು ಹಿರಿಯಡ್ಕ ಪೇಟೆಯ ಸಿಂಡಿಕೇಟ್ ಬ್ಯಾಂಕ್ ಎದುರು ಕಿಶನ್ ಹೆಗ್ಡೆ ಕಾರನ್ನು ತಡೆದು ನಿಲ್ಲಿಸಿ ದರು. ಆಗ ಕಾರಿನಿಂದ ಇಳಿದು ಓಡಲು ಯತ್ನಿಸಿದ ಕಿಶನ್ ಹೆಗ್ಡೆಯ ಮೇಲೆ ತಲವಾರು ದಾಳಿ ನಡೆಸಿದ ದುಷ್ಕರ್ಮಿ ಗಳು, ಸಾರ್ವಜನಿಕರ ಮುಂದೆಯೇ ಕೊಲೆಗೈದು ಪರಾರಿಯಾದರು.

ಗಂಭೀರವಾಗಿ ಗಾಯಗೊಂಡ ಕಿಶನ್ ಹೆಗ್ಡೆ ಸ್ಥಳದಲ್ಲಿಯೇ ಮೃತಪಟ್ಟರು. ದಾಳಿಯ ವೇಳೆ ಕಿಶನ್ ಹೆಗ್ಡೆ ಜೊತೆ ಇದ್ದ ಓರ್ವ ಓಡಿ ಹೋಗಿದ್ದು, ಮತ್ತೋರ್ವ ಅಲ್ಲೇ ಇದ್ದರೆಂದು ಪೊಲೀಸರು ತಿಳಿಸಿದ್ದಾರೆ. ಕಿಶನ್ ಹೆಗ್ಡೆಯ ತಂದೆ ಮನೆ ಹಿರಿಯಡ್ಕದಲ್ಲಿದ್ದು, ಆತ ತನ್ನ ತಂದೆ ಮನೆ ಅಥವಾ ಹಿರಿಯಡ್ಕ ದೇವಸ್ಥಾನಕ್ಕೆ ಬರುತ್ತಿದ್ದ ಎನ್ನಲಾಗುತ್ತಿದೆ.

ಪೂನಾದಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಈತ, ಹಣಕಾಸು ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಈ ಕೊಲೆಗೆ ಹಣಕಾಸಿನ ವ್ಯವಹಾರವೇ ಕಾರಣ ಇರಬಹುದೆಂದು ಶಂಕಿಸಲಾಗಿದೆ. ಪೊಲೀಸರು ಹಿರಿಯಡ್ಕ ಪೇಟೆಯ ಅಂಗಡಿಗಳಲ್ಲಿನ ಸಿಸಿ ಟಿವಿ ಪೂಟೇಜ್‌ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳು ಬಿಟ್ಟು ಪರಾರಿಯಾಗಿದ್ದ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಹಿರಿಯಡ್ಕ ಎಸ್ಸೈ ಸುಧಾಕರ್ ತೋನ್ಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದ್ದು ತನಿಖೆ ನಡೆಯುತ್ತಿದೆ.

ಕೊಲೆ ಪ್ರಕರಣದ ಆರೋಪಿ

ರೌಡಿ ಶೀಟರ್ ಕಿಶನ್ ಹೆಗ್ಡೆ, ಪಡುಬಿದ್ರೆ ಠಾಣಾ ವ್ಯಾಪ್ತಿಯ ಸಾಂತೂರು ಗ್ರಾಮದ ಕಾಂಜರಕಟ್ಟೆ ಬಾರ್ ಬಳಿ 2018ರ ಫೆ.28ರಂದು ನಡೆದ ರೌಡಿ ಶೀಟರ್ ನವೀನ್ ಡಿಸೋಜ ಕೊಲೆ ಪ್ರಕರಣದ ಪ್ರಮುಖ ಆರೋಪಿ. ಇದೇ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ, ಮಣಿಪಾಲ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯಿದೆ ಪ್ರಕರಣದಲ್ಲಿ ಮತ್ತು ಬೆಂಗಳೂರಿನ ಬಾಣಸವಾಡಿ ಠಾಣೆಯಲ್ಲಿ ಕೊಲೆಯ್ನ ಪ್ರಕರಣದ ಆರೋಪಿಯಾಗಿದ್ದನು.

ನಾಲ್ಕು ತಂಡ ರಚನೆ: ಎಸ್ಪಿ

ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ನೇತೃತ್ವದಲ್ಲಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸ ಲಾಗಿದೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಪೊಲೀಸ್ ತಂಡ ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆದಿದೆ. ಕೊಲೆಗೆ ಕಾರಣ ಏನು ಎಂಬುದು ತನಿಖೆಯಿಂದ ಹೊರಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News