ಮಣಿಪಾಲ ಕೆಎಂಸಿನಲ್ಲಿ ಕೋವಿಡ್ -19 ಪ್ಲಾಸ್ಮಾ ಬ್ಯಾಂಕ್ ಪ್ರಾರಂಭ

Update: 2020-09-24 12:29 GMT

ಮಣಿಪಾಲ, ಸೆ.24: ಮಣಿಪಾಲದ ಕೆಎಂಸಿ ಆಸ್ಪತ್ರೆಯ ರಕ್ತ ಕೇಂದ್ರ (ಬ್ಲಡ್ ಬ್ಯಾಂಕ್)ದಲ್ಲಿ ಕೋವಿಡ್-18ಕ್ಕೆ ಚಿಕಿತ್ಸೆ ನೀಡುವ ಪ್ಲಾಸ್ಮಾ ಬ್ಯಾಂಕ್‌ನ್ನು ಪ್ರಾರಂಭಿಸಲಾಗಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರವು ಇತ್ತೀಚೆಗೆ ದಾನಿಗಳ ಪ್ಲಾಸ್ಮಾ ಫೆರೆಸಿಸ್ ಮಾಡಲು ಪರವಾನಗಿ ಪಡೆದಿದ್ದು, ಇದೀಗ ಅಗತ್ಯವಿರುವ ರೋಗಿಗಳಿಗೆ ಅನುಕೂಲಕರ ಪ್ಲಾಸ್ಮಾವನ್ನು ಒದಗಿಸಲು ಪ್ಲಾಸ್ಮಾ ಬ್ಯಾಂಕ್ ಅನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರವು ಇತ್ತೀಚೆಗೆ ದಾನಿಗಳ ಪ್ಲಾಸ್ಮಾ ಫೆರೆಸಿಸ್ ಮಾಡಲು ಪರವಾನಗಿ ಪಡೆದಿದ್ದು, ಇದೀಗ ಅಗತ್ಯವಿರುವ ರೋಗಿಗಳಿಗೆ ಅನುಕೂಲಕರ ಪ್ಲಾಸ್ಮಾವನ್ನು ಒದಗಿಸಲು ಪ್ಲಾಸ್ಮಾ ಬ್ಯಾಂಕ್ ಅನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೋವಿಡ್-19ರಿಂದ ಚೇತರಿಸಿ ಕೊಂಡ ರೋಗಿಗಳಿಂದ ಪಡೆದ ಪ್ಲಾಸ್ಮವನ್ನು ಕೋವಿಡ್-19 ಸೋಂಕಿತ ರೋಗಿಗಳಿಗೆ ಚಿಕಿತ್ಸೆಯಾಗಿ ಬಳಸಬಹುದು. ಸುಸ್ಥಿರ ಪ್ಲಾಸ್ಮಾದಲ್ಲಿ ವೈರಸ್ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳು ಇರುತ್ತವೆ. ಆದ್ದರಿಂದ ವೈರಸ್ ಕಣಗಳನ್ನು ತಟಸ್ಥಗೊಳಿಸುವ ಮೂಲಕ ರೋಗಿಗೆ ಪ್ರಯೋಜನವಾಗುವ ಸಾಧ್ಯತೆಯಿದೆ ಎಂದೂ ಅವರು ಹೇಳಿದ್ದಾರೆ.

ಪ್ಲಾಸ್ಮಾ ಚಿಕಿತ್ಸೆಯ ಕುರಿತು ಮಾತನಾಡಿದ ಮಣಿಪಾಲ ಕೆಎಂಸಿ ಆಸ್ಪತ್ರೆ ರಕ್ತ ಕೇಂದ್ರದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ. ಶಮೀ ಶಾಸ್ತ್ರಿ, ಸಮಗ್ರ ತಪಾಸಣೆಯ ನಂತರ, ನಾವು ನಿಯಂತ್ರಕ ಮಾರ್ಗಸೂಚಿಗಳ ಪ್ರಕಾರ ಅರ್ಹ ದಾನಿಗಳಿಂದ ಪ್ಲಾಸ್ಮಾವನ್ನು ಸಂಗ್ರಹಿಸುತ್ತೇವೆ ಮತ್ತು ಕ್ಲಿನಿಕಲ್ ಬೇಡಿಕೆಯ ಆಧಾರದ ಮೇಲೆ ದಾಸ್ತಾನು ಕಾರ್ಯವನ್ನು ನಿರ್ವಹಿಸಲಾಗುತ್ತದೆ ಎಂದರು.

‘ರೋಗಲಕ್ಷಣಗಳಿಂದ ಸಂಪೂರ್ಣವಾಗಿ ಮುಕ್ತವಾದ 28 ದಿನಗಳ ನಂತರ 18-60 ವರ್ಷ ವಯಸ್ಸಿನವರು ಪ್ಲಾಸ್ಮಾ ದಾನಿಯಾಗಿ ನೋಂದಾಯಿಸಿ ಕೊಳ್ಳ ಬಹುದು. ದಾನಿಗಳ ತಪಾಸಣೆ ಮುಖ್ಯವಾಗಿ ದೈಹಿಕ ಪರೀಕ್ಷೆ, ಕೋವಿಡ್ -19ಗೆ ಪ್ರತಿಕಾಯದ ಗರಿಷ್ಠ ಮಟ್ಟವನ್ನು ಪರಿಶೀಲಿಸುವುದು, ರಕ್ತ ಗುಂಪು, ವರ್ಗಾವಣೆಯಿಂದ ಹರಡುವ ಸೋಂಕಿನ ತಪಾಸಣೆ ಮತ್ತು ಒಟ್ಟು ಸೀರಮ್ ಪ್ರೋಟೀನ್ ಮಟ್ಟವನ್ನು ಅಂದಾಜು ಮಾಡುವುದು ಸೇರಿವೆ.’ ಎಂದರು.

ಪ್ಲಾಸ್ಮಾ ಫೆರೆಸಿಸ್ ವಿಧಾನವು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಅರ್ಹ ದಾನಿಗಳು ತಿಂಗಳಲ್ಲಿ ಎರಡು ಬಾರಿ ಪ್ಲಾಸ್ಮಾ ದಾನ ಮಾಡಬಹುದು ಮತ್ತು ಇದು ಪಾಕ್ಷಿಕವಾಗಿ ವರ್ಷಕ್ಕೆ 24 ಬಾರಿಗಿಂತ ಹೆಚ್ಚಾಗಬಾರದು ಎಂದೂ ಡಾ.ಶಮೀ ಹೇಳಿದರು.

ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಮಣಿಪಾಲ ಡೀನ್ ಡಾ.ಶರತ್ ಕೆ ರಾವ್ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿ ಸಿ. ಜಿ. ಮುತ್ತಣ್ಣ ಅವರು ಪ್ಲಾಸ್ಮಾ ಬ್ಯಾಂಕ್‌ನ್ನು ಪ್ರಾರಂಭಿಸಲು ಶ್ರಮಿಸಿದ ತಂಡವನ್ನು ಅಭಿನಂದಿಸಿದರು.

ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರವು, ಕೋವಿಡ್-19ರಿಂದ ಚೇತರಿಸಿಕೊಂಡ ವ್ಯಕ್ತಿಗಳು ಪ್ಲಾಸ್ಮಾ ದಾನಕ್ಕೆ ಮುಂದೆ ಬರುವ ಮೂಲಕ ಈ ಉದಾತ್ತ ಕಾರ್ಯಕ್ಕೆ ನೋಂದಾಯಿಸಿಕೊಳ್ಳುವಂತೆ ವಿನಂತಿಸಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:0820-2922331ನ್ನು ಸಂಪರ್ಕಿಸುವಂತೆ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News