ಕೊರೋನ ವಿರುದ್ಧ ಹೋರಾಟಕ್ಕೆ ವಿಪತ್ತು ಸ್ಪಂದನಾ ನಿಧಿಯ ಬಳಕೆಗೆ ರಾಜ್ಯಗಳಿಗೆ ಕೇಂದ್ರ ಅವಕಾಶ

Update: 2020-09-24 18:17 GMT

ಹೊಸದಿಲ್ಲಿ, ಸೆ. 24: ಕೊರೋನ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಕ್ವಾರಂಟೈನ್ ಸೌಲಭ್ಯ, ಪರೀಕ್ಷೆಗೆ ಪ್ರಯೋಗಾಲಯ, ಆಮ್ಲಜನಕ ಉತ್ಪಾದಿಸುವ ಘಟಕ, ವೆಂಟಿಲೇಟರ್ ಖರೀದಿ ಹಾಗೂ ಪಿಪಿಇ ಕಿಟ್‌ಗಳಂತಹ ಮೂಲ ಸೌಕರ್ಯಗಳನ್ನು ವರ್ಧಿಸಲು ರಾಜ್ಯ ವಿಪತ್ತು ಸ್ಪಂದನಾ ನಿಧಿ (ಎಸ್‌ಡಿಆರ್‌ಎಫ್)ಯ ಶೇ. 50ರಷ್ಟು ಹಣವನ್ನು ವೆಚ್ಚ ಮಾಡಲು ಕೇಂದ್ರ ಸರಕಾರ ರಾಜ್ಯಗಳಿಗೆ ಅನುಮತಿ ನೀಡಿದೆ.

 ಕೊರೋನ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಮೂಲ ಸೌಕರ್ಯಗಳನ್ನು ಹೆಚ್ಚಿಸಲು ರಾಜ್ಯ ವಿಪತ್ತು ಸ್ಪಂದನಾ ನಿಧಿಯ ವೆಚ್ಚದ ರಾಜ್ಯದ ಮಿತಿಯನ್ನು ತನ್ನ ಸರಕಾರ ಹೆಚ್ಚಿಸಿದೆ ಎಂದು ಬುಧವಾರ ಕೊರೋನದಿಂದ ಅತಿ ಪೀಡಿತ 7 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳೊಂದಿಗಿನ ಸಂವಹನದ ಸಂದರ್ಭ ಕೇಂದ್ರ ಗೃಹ ಸಚಿವಾಲಯ, ಕೊರೋನ ನಿಯಂತ್ರಣಕ್ಕೆ ಸಾಮಗ್ರಿಗಳ ಪಟ್ಟಿ ಹಾಗೂ ನೆರವಿನ ನಿಯಮಗಳಲ್ಲಿ ಭಾಗಶಃ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿತ್ತು.

 ಕ್ವಾರಂಟೈನ್, ಸ್ಯಾಂಪಲ್ ಸಂಗ್ರಹ ಹಾಗೂ ತಪಾಸಣಾ ಸೌಲಭ್ಯ ಸೇರಿದಂತೆ ಈ ವಲಯಗಳಲ್ಲಿ ರಾಜ್ಯಗಳು ರಾಜ್ಯ ವಿಪತ್ತು ಸ್ಪಂದನಾ ನಿಧಿ ಯ ಶೇ. 50ನ್ನು ವೆಚ್ಚ ಮಾಡಬಹುದು.

  ಕ್ವಾರಂಟೈನ್ ಕ್ಯಾಂಪ್‌ಗಳಲ್ಲಿ ಆಶ್ರಯ ಪಡೆದುಕೊಂಡಿರುವ (ಹೋಂ ಕ್ವಾರಂಟೈನ್ ಹೊರತುಪಡಿಸಿ) ಅಥವಾ ಗುಂಪು ಕಂಟೈನ್ಮೆಂಟ್ ವಲಯದಲ್ಲಿರುವ ಕೊರೋನ ಸೋಂಕಿತರಿಗೆ ತಾತ್ಕಾಲಿಕ ವಸತಿ, ಆಹಾರ, ಬಟ್ಟೆ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸುವ ನಿಬಂಧನೆಯನ್ನು ಈ ಮಾರ್ಪಾಟು ನಿಯಮ ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News