ಯೆಸ್ ಬ್ಯಾಂಕ್ ಹಗರಣ: 127 ಕೋ.ರೂ. ಮೌಲ್ಯದ ರಾಣಾ ಕಪೂರ್ ಫ್ಲ್ಯಾಟ್ ಜಪ್ತಿ

Update: 2020-09-25 17:04 GMT

ಹೊಸದಿಲ್ಲಿ,ಸೆ.25: ಅಕ್ರಮ ಹಣ ವರ್ಗಾವಣೆ ಆರೋಪವನ್ನೆದುರಿಸುತ್ತಿರುವ ಯೆಸ್ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರಾಣಾ ಕಪೂರ್ ಅವರಿಗೆ ಸೇರಿದ ಲಂಡನ್ ನಲ್ಲಿಯ 127 ಕೋ.ರೂ.ಮೌಲ್ಯದ ಫ್ಲಾಟ್ ಅನ್ನು ಜಾರಿ ನಿರ್ದೇಶನಾಲಯ (ಈ.ಡಿ.)ವು ತಾತ್ಕಾಲಿಕವಾಗಿ ವಶಪಡಿಸಿಕೊಂಡಿದೆ.

ರಾಣಾ 2017ರಲ್ಲಿ ಈ ಫ್ಲಾಟ್‌ನ್ನು 93 ಕೋ.ರೂ.ಗಳಿಗೆ ಡುಇಟ್ ಕ್ರಿಯೇಷನ್ಸ್ ಜೆರ್ಸಿ ಲಿ.ನ ಹೆಸರಿನಲ್ಲಿ ಖರೀದಿಸಿದ್ದರು. ಅವರು ಸದ್ರಿ ಫ್ಲ್ಯಾಟ್‌ನ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರು ಎಂದು ಈ.ಡಿ.ಅಧಿಕಾರಿಗಳು ಶುಕ್ರವಾರ ತಿಳಿಸಿದರು.

 ಸಿಬಿಐ ಕಳೆದ ಮಾರ್ಚ್‌ನಲ್ಲಿ ಕಪೂರ್ ವಿರುದ್ಧ ಎರಡು ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸಿಕೊಂಡ ಬಳಿಕ ಅಕ್ರಮ ಹಣ ವರ್ಗಾವಣೆ ಆರೋಪಗಳ ಕುರಿತು ಈ.ಡಿ.ತನಿಖೆಯನ್ನು ಆರಂಭಿಸಿತ್ತು. ಯೆಸ್ ಬ್ಯಾಂಕ್ 2018 ರ ಎಪ್ರಿಲ್-ಜೂನ್ ನಡುವಿನ ಅವಧಿಯಲ್ಲಿ ದಿವಾನ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ (ಡಿಎಚ್‌ಎಫ್‌ಎಲ್)ನ ಅಲ್ಪಾವಧಿಯ ಸಾಲಪತ್ರಗಳಲ್ಲಿ 3,700 ಕೋ.ರೂ.ಗಳನ್ನು ತೊಡಗಿಸಿತು. ಇದಕ್ಕೆ ಪ್ರತಿಯಾಗಿ ರಾಣಾ ಡಿಎಚ್‌ಎಫ್‌ಎಲ್‌ನ ಪ್ರವರ್ತಕರಾದ ವಾಧ್ವಾನ್ ಸೋದರರಿಂದ 600 ಕೋ.ರೂ.ಗಳ ಕಮಿಷನ್ ಸ್ವೀಕರಿಸಿದ್ದರು ಎಂದು ಆರೋಪಿಸಲಾಗಿದೆ.

ಎರಡನೇ ಪ್ರಕರಣದಲ್ಲಿ ರಾಣಾ ಮತ್ತು ಅವರ ಪತ್ನಿ ಬಿಂದು ಅವಂತಾ ಗ್ರೂಪ್‌ನ ಪ್ರವರ್ತಕ ಗೌತಮ್ ಥಾಪರ್ ಅವರಿಂದ ಬಂಗಲೆಯೊಂದನ್ನು ಮಾರುಕಟ್ಟೆ ವೌಲ್ಯಕ್ಕಿಂತ ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಿದ್ದರು.

ತನಿಖೆಯ ಬಳಿಕ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಕಪೂರ್ ದಂಪತಿ ಮತ್ತು ಅವರ ಮೂವರು ಪುತ್ರಿಯರ ವಿರುದ್ದ ಈ.ಡಿ.ಆರೋಪಪಟ್ಟಿಯನ್ನು ದಾಖಲಿಸಿದೆ.

ವಾಧ್ವಾನ್ ಸೋದರರಿಗೆ ಸೇರಿದ 1411 ಕೋ,.ರೂ.ಮೌಲ್ಯದ ಆಸ್ತಿ ಮತ್ತು ಕಪೂರ್ ಸ್ವೀಕರಿಸಿದ್ದ ಲಂಚದ ಹಣ 600 ಕೋ.ರೂಗಳನ್ನು ಈ.ಡಿ ಜಪ್ತಿ ಮಾಡಿದೆ. ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆಯಡಿ ಪ್ರತ್ಯೇಕ ಪ್ರಕರಣದಲ್ಲಿ ಕಪೂರ್‌ಗೆ ಸೇರಿದ 307 ಕೋ.ರೂ.ಮೌಲ್ಯದ ಆಸ್ತಿಯನ್ನೂ ಈ.ಡಿ.ವಶಪಡಿಸಿಕೊಂಡಿದೆ.

                  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News