ಬಾಲಕ ವಿಶ್ವನಾಥನ್ ಆನಂದ್ ಅವರಿಗೆ ಬೆಂಬಲ ನೀಡಿದ್ದ ಎಸ್‌ಪಿಬಿ

Update: 2020-09-25 15:23 GMT

ಹೊಸದಿಲ್ಲಿ, ಸೆ. 25: 1983ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ‘ಮದ್ರಾಸ್ ಕೋಲ್ಟ್ಸ್’ ಹೆಸರಿನ ಚೆಸ್ ತಂಡಕ್ಕೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಪ್ರಾಯೋಜಕತ್ವ ನೀಡಿದ್ದರು. ಇದರಲ್ಲೇನು ವಿಶೇಷ ಅಂದರೆ, ಈ ತಂಡದಲ್ಲಿ 14ರ ಹರೆಯದ ಚೆಸ್ ಆಟಗಾರ ವಿಶ್ವನಾಥ್ ಆನಂದ್ ಕೂಡ ಸದಸ್ಯರಾಗಿ ಇದ್ದರು. ‘ಮದ್ರಾಸ್ ಕೋಲ್ಟ್ಸ್’ ತಂಡ ತುಂಬಾ ಪ್ರತಿಭಾನ್ವಿತ ಚೆಸ್ ತಂಡ. ಅವರಿಗೆ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳಲು ಪ್ರಾಯೋಜಕತ್ವದ ಅಗತ್ಯ ಇದೆ ಎಂಬುದನ್ನು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಗೆಳೆಯರ ಮೂಲಕ ತಿಳಿದುಕೊಂಡಿದ್ದರು. 1983ರಲ್ಲಿ ಎಸ್‌ಪಿಬಿ ಅವರು ಈ ತಂಡಕ್ಕೆ ಪ್ರಾಯೋಜಕತ್ವ ನೀಡಲು ಒಪ್ಪಿಕೊಂಡಿದ್ದರು. ಅಲ್ಲದೆ ಆಯೋಜಕರಿಗೆ ಹಣವನ್ನು ಹಸ್ತಾಂತರಿಸಿದ್ದರು. ಈ ತಂಡಕ್ಕೆ ಪ್ರಾಯೋಜಕತ್ವ ನೀಡಿದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡುಗಾರಿಕೆಯಲ್ಲಿ ಖ್ಯಾತಿ ಪಡೆದರೆ, ಪ್ರಾಯೋಜಕತ್ವ ಸ್ವೀಕರಿಸಿದ ‘ಮದ್ರಾಸ್ ಕೋಲ್ಟ್ಸ್’ ತಂಡದ ಸದಸ್ಯ ವಿಶ್ವನಾಥನ್ ಆನಂದ್ ಚೆಸ್‌ನಲ್ಲಿ ಖ್ಯಾತಿ ಗಳಿಸಿದರು. 

ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ವಿಶ್ವನಾಥ್ ಆನಂದ್ ಟ್ವೀಟ್ ಮಾಡಿ ತಮಗೆ ಮೊದಲ ಪ್ರಾಯೋಜಕತ್ವ ನೀಡಿದ ಎಸ್‌ಪಿಬಿ ಅವರನ್ನು ನೆನಪಿಸಿಕೊಂಡಿದ್ದಾರೆ. ‘‘ಅದು ನಾಲ್ಕು ಸದಸ್ಯರ ತಂಡ. ಈ ತಂಡಕ್ಕೆ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳಲು ಮುಂಬೈಗೆ ಹೋಗುವುದಕ್ಕೆ ಹಣಕಾಸಿನ ಸಮಸ್ಯೆ ಇತ್ತು’’ ಎಂದು ವಿಶ್ವನಾಥನ್ ಆನಂದ್ ಅವರ ಪತ್ನಿ ಅರುಣಾ ವಿಶ್ವನಾಥನ್ ಆನಂದ್ ಹೇಳಿದ್ದಾರೆ. ‘‘ರಾಷ್ಟ್ರೀಯ ಮಟ್ಟದಲ್ಲಿ ವಿಶ್ವನಾಥನ್ ಆನಂದ್ ಅವರು ಬೆಳೆಯಲು ನೆರವಾದ ಟೂರ್ನಮೆಂಟ್‌ಗಳಲ್ಲಿ ಇದು ಕೂಡ ಒಂದು’’ ಎಂದು ಅವರು ತಿಳಿಸಿದ್ದಾರೆ. ವಿಶ್ವನಾಥ್ ಆನಂದ್ ಅವರ ತಾಯಿ ಅಡುಗೆ ಮಾಡುವಾಗ ಅಡುಗೆ ಕೋಣೆಯಲ್ಲಿ ರೇಡಿಯೋ ಇರಿಸಿ ಎಸ್‌ಪಿಬಿಯ ಸಂಗೀತ ಆಲಿಸುತ್ತಿದ್ದರು. ಇದರಿಂದ ವಿಶ್ವನಾಥ್ ಆನಂದ್ ಕೂಡ ಎಸ್‌ಪಿಬಿ ಅವರ ಹಾಡು ಕೇಳುತ್ತಾ ಬೆಳೆದರು ಎಂದು ಅರುಣಾ ಹೇಳಿದ್ದಾರೆ. ಹಲವು ವರ್ಷಗಳ ಕಾಲದಿಂದ ಆನಂದ್ ಹಾಗೂ ಅರುಣಾ ಅವರು ಎಸ್‌ಪಿಬಿ ಸಂಪರ್ಕದೊಂದಿಗೆ ಬೆಳೆದರು. ಆನಂದ್ ಹಾಗೂ ಎಸ್‌ಪಿಬಿ ತಮ್ಮ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದರು. ಆದರೆ, ಇಬ್ಬರೂ ಎತ್ತರಕ್ಕೆ ಬೆಳೆದಿದ್ದರೂ ತಮ್ಮ ಸರಳತೆಯನ್ನು ಬಿಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News