ಜಮ್ಮು-ಕಾಶ್ಮೀರ: ನ್ಯಾಯವಾದಿ ಖಾದ್ರಿ ಹತ್ಯೆಯ ತನಿಖೆಗೆ ವಿಶೇಷ ತನಿಖಾ ತಂಡದ ರಚನೆ

Update: 2020-09-25 15:58 GMT

ಶ್ರೀನಗರ,ಸೆ.25: ಇಲ್ಲಿ ಗುರುವಾರ ಅಪರಿಚಿತ ಪಿಸ್ತೂಲುಧಾರಿಗಳಿಂದ ನ್ಯಾಯವಾದಿ ಬಾಬರ್ ಖಾದ್ರಿ ಅವರ ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡ (ಸಿಟ್)ವನ್ನು ರಚಿಸಲಾಗಿದೆ.

 ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಐಜಿಪಿ (ಕಾಶ್ಮೀರ) ವಿಜಯಕುಮಾರ ಅವರು,ಇದು ಪೊಲೀಸ್ ಪಡೆಗೆ ಆದ್ಯತೆಯ ಪ್ರಕರಣವಾಗಿದೆ. ಹಜರತ್‌ಬಾಲ್ ಎಸ್‌ಪಿ ನೇತೃತ್ವದ ಸಿಟ್ ಕಾನೂನು ತಜ್ಞರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿದೆ. ತನಿಖೆ ನಡೆಸಿ ಪ್ರಕರಣವನ್ನು ತಕ್ಷಣ ಬಗೆಹರಿಸುವಂತೆ ಸೂಚಿಸಲಾಗಿದೆ. ದಾಳಿಕೋರರನ್ನು ಶೀಘ್ರವೇ ಬಂಧಿಸಲಾಗುವುದು. ಬಂಧಿಸಲು ಸಾಧ್ಯವಾಗದಿದ್ದರೆ ಎನ್‌ಕೌಂಟರ್‌ನಲ್ಲಿ ಅವರನ್ನು ಕೊಲ್ಲುತ್ತೇವೆ ಎಂದರು.

 ಗುರುವಾರ ಸಂಜೆ ನಗರದ ಹವಲ್ ಪ್ರದೇಶದಲ್ಲಿರುವ ನಿವಾಸಕ್ಕೆ ಕೈಗಳಲ್ಲಿ ಕಡತಗಳನ್ನು ಹಿಡಿದುಕೊಂಡು ಮುಖಕ್ಕೆ ಮಾಸ್ಕ್ ಧರಿಸಿ ಕಕ್ಷಿದಾರ ಸೋಗಿನಲ್ಲಿ ಬಂದಿದ್ದ ಅಪರಿಚಿತ ಉಗ್ರರು ಖಾದ್ರಿಯವರನ್ನು ಪಿಸ್ತೂಲಿನಿಂದ ಗುಂಡಿಟ್ಟು ಹತ್ಯೆ ಮಾಡಿದ್ದರು. ತಲೆಗೆ ನಾಲ್ಕು ಗುಂಡುಗಳು ಹೊಕ್ಕಿದ್ದು,ತೀವ್ರವಾಗಿ ಗಾಯಗೊಂಡಿದ್ದ ಖಾದ್ರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದರು.

2018ರಲ್ಲಿ ಕಾದ್ರಿಯವರ ಕಾರಿನ ಮೇಲೆ ಗುಂಡು ಹಾರಾಟ ನಡೆದಿತ್ತು ಮತ್ತು ಅವರಿಗೆ ಜೀವ ಬೆದರಿಕೆಯಿತ್ತು, ಆದರೆ ಪೊಲೀಸರ ಮನವಿಯ ಹೊರತಾಗಿಯೂ ಅವರು ಸುರಕ್ಷಿತ ಸ್ಥಳಕ್ಕೆ ವಾಸವನ್ನು ಬದಲಿಸಲು ನಿರಾಕರಿಸಿದ್ದರು ಎಂದು ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News