ಐಸಿಸ್‌ನಿಂದ ಸ್ವದೇಶಕ್ಕೆ ಮರಳಿದ್ದ ಕೇರಳದ ವ್ಯಕ್ತಿಯ ದೋಷನಿರ್ಣಯ, ಸೋಮವಾರ ಶಿಕ್ಷೆ ಘೋಷಣೆ

Update: 2020-09-25 16:34 GMT

ತಿರುವನಂತಪುರ,ಸೆ.25: ಐಸಿಸ್‌ನಿಂದ ಮರಳಿದ್ದ ಕೇರಳದ ನಿವಾಸಿ ಸುಬಹನಿ ಹಾಜಾ ಮೊಯಿದೀನ್ (34) ಎಂಬಾತ ಮಿತ್ರರಾಷ್ಟ್ರದ ವಿರುದ್ಧ ಯುದ್ಧವನ್ನು ಸಾರಿದ್ದ ತಪ್ಪಿತಸ್ಥ ಎಂದು ಕೊಚ್ಚಿಯಲ್ಲಿಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಶುಕ್ರವಾರ ತೀರ್ಪು ನೀಡಿದ್ದು,ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಭಯೋತ್ಪಾದನೆ ಪ್ರಕರಣದಲ್ಲಿ ಮಿತ್ರರಾಷ್ಟ್ರದ ವಿರುದ್ಧ ಯುದ್ಧವನ್ನು ಸಾರಿದ್ದಕ್ಕಾಗಿ ಐಪಿಸಿಯ ಕಲಂ 125ನ್ನು ಹೇರಲಾಗಿತ್ತು ಎಂದು ಕಾನೂನು ತಜ್ಞರು ಹೇಳಿದ್ದಾರೆ. ಕಲಂ 125ರ ಜೊತೆಗೆ ಐಪಿಸಿ ಮತ್ತು ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯ ವಿವಿಧ ಕಲಮ್‌ಗಳಡಿಯೂ ಮೊಯಿದೀನ್ ವಿರುದ್ಧ ಆರೋಪಗಳನ್ನು ಹೊರಿಸಲಾಗಿತ್ತು. ಅಲ್ಲದೆ ಮೊದಲ ಬಾರಿ ಹಿರಿಯ ಐಎಫ್‌ಎಸ್ ಅಧಿಕಾರಿಯೋರ್ವರನ್ನು ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಕರೆಸಲಾಗಿತ್ತು.

  ನವಂಬರ್ 2015ರ ಪ್ಯಾರಿಸ್ ದಾಳಿಗಳಿಗೆ ಸಂಬಂಧಿಸಿದಂತೆ ಮೊಯಿದೀನ್‌ನನ್ನು ಫ್ರೆಂಚ್ ಗುಪ್ತಚರ ಸಂಸ್ಥೆಗಳು ಈ ಹಿಂದೆ ಪ್ರಶ್ನಿಸಿದ್ದವು. ತಾನು ಇರಾಕ್‌ನಲ್ಲಿದ್ದಾಗ ಪ್ಯಾರಿಸ್ ದಾಳಿಗಳ ರೂವಾರಿ ಅಬ್ದೆಲ್ ಹಾಮಿದ್ ಅಬ್ಬೌದ್ ಜೊತೆ ಕೆಲಸ ಮಾಡಿದ್ದೆ ಎಂದಾತ ತಿಳಿಸಿದ್ದ. ಸ್ವದೇಶಕ್ಕೆ ಮರಳಿದ ಬಳಿಕ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ತಲೆ ಮರೆಸಿಕೊಂಡು ವಾಸವಿದ್ದ ಮೊಯಿದೀನ್‌ನನ್ನು ಎನ್‌ಐಎ 2016ರಲ್ಲಿ ಬಂಧಿಸಿತ್ತು.

ಮೂಲತಃ ಕೇರಳದ ಇಡುಕ್ಕಿ ಜಿಲ್ಲೆಯ ನಿವಾಸಿಯಾದ ಮೊಯಿದೀನ್ 2015ರಲ್ಲಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದು,ಬಳಿಕ ಸಿರಿಯಾ ತಲುಪಿ ಐಸಿಸ್‌ಗೆ ಸೇರ್ಪಡೆಗೊಂಡಿದ್ದ. ದಾಳಿಯೊಂದರ ಸಂದರ್ಭ ತನ್ನ ಸಹಚರ ಜೀವಂತ ದಹನಗೊಂಡಿದ್ದನ್ನು ಕಂಡ ಬಳಿಕ ಆತ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದನಾದರೂ ಇತರ ಐಸಿಸ್ ಉಗ್ರರ ಕೈಗೆ ಸಿಕ್ಕಿಬಿದ್ದಿದ್ದ. ತಾನು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದಾಗಿ ಐಸಿಸ್ ನಾಯಕತ್ವಕ್ಕೆ ಭರವಸೆ ನೀಡಿದ ಬಳಿಕವೇ ಆತನನ್ನು ಬಿಡುಗಡೆಗೊಳಿಸಲಾಗಿತ್ತು. ಬಂಧನದ ಸಂದರ್ಭ ಮೊಯಿದೀನ್ ಕೆಲವು ನ್ಯಾಯಾಧೀಶರು ಮತ್ತು ಹಿರಿಯ ರಾಜಕೀಯ ನಾಯಕರ ಮೇಲೆ ದಾಳಿಗಳಿಗೆ ಸಂಚು ರೂಪಿಸುತ್ತಿದ್ದ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News