ತಬ್ರೇಝ್ ಅನ್ಸಾರಿ ಹತ್ಯೆ ಪ್ರಕರಣ: ಇಬ್ಬರು ವೈದ್ಯರ ವಿರುದ್ಧ ಶಿಸ್ತುಕ್ರಮಕ್ಕೆ ಆದೇಶ

Update: 2020-09-25 16:45 GMT
ಫೈಲ್ ಚಿತ್ರ

ರಾಂಚಿ,ಸೆ.25: ಗುಂಪಿನಿಂದ ತಬ್ರೇಝ್ ಅನ್ಸಾರಿ ಹತ್ಯೆ ಪ್ರಕರಣದಲ್ಲಿ ಕರ್ತವ್ಯಲೋಪಕ್ಕಾಗಿ ಇಬ್ಬರು ವೈದ್ಯರ ವಿರುದ್ಧ ಶಿಸ್ತುಕ್ರಮಕ್ಕೆ ಜಾರ್ಖಂಡ್ ಸರಕಾರವು ಶುಕ್ರವಾರ ಆದೇಶಿಸಿದೆ.

ಗುಂಪಿನ ಥಳಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಅನ್ಸಾರಿಯನ್ನು ಸರಾಯ್‌ಕೇಲಾ-ಖರ್ಸಾವಾನ್‌ನ ಸದರ ಆಸ್ಪತ್ರೆಗೆ ಸಾಗಿಸಲಾಗಿತ್ತು. ವೈದ್ಯರಾದ ಡಾ.ಓಂ ಪ್ರಕಾಶ್ ಕೇಸರಿ ಮತ್ತು ಡಾ.ಶಾಹಿದ್ ಅನ್ವರ್ ಅವರು ಆತನ ಸೂಕ್ತ ತಪಾಸಣೆ ನಡೆಸಿರಲಿಲ್ಲ ಮತ್ತು ಆತ ಜೈಲಿಗೆ ಹೋಗಲು ಅರ್ಹನಾಗಿದ್ದಾನೆ ಎಂದು ಘೋಷಿಸಿದ್ದರು. ಇದು ಅನ್ಸಾರಿಯ ಸ್ಥಿತಿ ಇನ್ನಷ್ಟು ಹದಗೆಟ್ಟು ಆತ ಸಾವನ್ನಪ್ಪಲು ಕಾರಣವಾಗಿತ್ತು ಎಂದು ಆರೋಗ್ಯ ಸಚಿವ ಬನ್ನಾ ಗುಪ್ತಾ ತಿಳಿಸಿದರು.

ಕಳೆದ ವರ್ಷದ ಜೂ.18ರಂದು ಸರಾಯ್‌ಕೇಲಾದಲ್ಲಿ ಗುಂಪೊಂದು ಅನ್ಸಾರಿ ಮತ್ತು ಇತರ ಇಬ್ಬರನ್ನು ಬೈಕ್ ಕಳ್ಳರೆಂಬ ಶಂಕೆಯಿಂದ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿತ್ತು ಮತ್ತು ‘ಜೈ ಶ್ರೀರಾಮ ’ಹಾಗೂ ‘ಜೈ ಬಜರಂಗ ಬಲಿ ’ಎಂದು ಹೇಳುವಂತೆ ಬಲವಂತಗೊಳಿಸಿತ್ತು. ನಾಲ್ಕು ದಿನಗಳ ಬಳಿಕ ಜೂ.22ರಂದು ಅನ್ಸಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.

ತನ್ಮಧ್ಯೆ ಅನ್ಸಾರಿಯ ಪತ್ನಿ ಶಾಯಿಸ್ತಾ ಪರ್ವೀನ್ ಮುಖ್ಯಮಂತ್ರಿ ಹೇಮಂತ ಸೊರೇನ್‌ರನ್ನು ಭೇಟಿಯಾಗಿ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News