ಬಿಜೆಪಿ ಪಕ್ಷದ ಪದಾಧಿಕಾರಿಗಳ ಪುನರ್ ರಚನೆ: ಪಟ್ಟಿಯಿಂದ ಹೊರಗುಳಿದ ರಾಮ್ ಮಾಧವ್, ಮುರಳೀಧರ್ ರಾವ್

Update: 2020-09-26 11:49 GMT
ಜೆ ಪಿ ನಡ್ಡಾ

ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕರಾದ ರಾಮ್ ಮಾಧವ್, ಪಿ ಮುರಳೀಧರ್ ರಾವ್, ಅನಿಲ್ ಜೈನ್, ಸರೋಜ್ ಪಾಂಡೆ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಟ್ಟು  ನೂತನ ಪ್ರಧಾನ ಕಾರ್ಯದರ್ಶಿಗಳನ್ನಾಗಿ ದುಷ್ಯಂತ್ ಕುಮಾರ್ ಗೌತಮ್, ಡಿ ಪುರಂದೇಶ್ವರಿ, ಸಿ ಟಿ ರವಿ ಹಾಗೂ ತರುಣ್ ಚುಘ್ ಅವರನ್ನು ನೇಮಕಗೊಳಿಸಲಾಗಿದೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಪಕ್ಷದ ನಾಯಕತ್ವ ಇಂದು ನೇಮಿಸಿದೆ. ಈ ಹುದ್ದೆಯಲ್ಲಿ ಇಲ್ಲಿಯ ತನಕ ಪೂನಂ ಮಹಾಜನ್ ಅವರಿದ್ದರು.

ಪಕ್ಷದ ರಾಷ್ಟ್ರೀಯ ವಕ್ತಾರರ ಸಂಖ್ಯೆಯನ್ನು 23ಕ್ಕೆ ಏರಿಸಲಾಗಿದ್ದು ಸಂಸದ ಅನಿಲ್ ಬಲೂನಿ ಅವರು ಮಾಧ್ಯಮ ಉಸ್ತುವಾರಿಯಾಗಿ ಮುಂದುವರಿಯುವುದರ ಜತೆಗೆ ಮುಖ್ಯ ವಕ್ತಾರರಾಗಿ ನೇಮಕಗೊಂಡಿದ್ದಾರೆ.

ಪಕ್ಷದ ಹೊಸ ವಕ್ತಾರರಲ್ಲಿ ರಾಜೀವ್ ಚಂದ್ರಶೇಖರ್, ರಾಜ್ಯವರ್ಧನ್ ಸಿಂಗ್ ರಾಥೋರ್, ಸಂಜು ವರ್ಮ, ಇಕ್ಬಾಲ್ ಸಿಂಗ್ ಲಾಲ್ಪುರ, ಅಪರಾಜಿತ ಸಾರಂಗಿ, ಹೀನಾ ಗವಿತ್, ಎಂ ಕಿಕೊನ್, ನೂಪುರ್ ಶರ್ಮ, ರಾಜು ಬಿಷ್ಠ್ ಹಾಗೂ ಕೆ ಕೆ ಶರ್ಮ ಸೇರಿದ್ದಾರೆ.

ಹೊಸ ನೇಮಕಾತಿಗಳನ್ನು ಇಂದು ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಘೋಷಿಸಿದರು. ರಾಧಾ ಮೋಹನ್ ಸಿಂಗ್, ಮುಕುಲ್ ರಾಯ್, ರೇಖಾ ವರ್ಮ, ಅನ್ನಪೂರ್ಣ ದೇವಿ, ಭಾರತಿ ಶಿಯಲ್, ಡಿ ಕೆ ಅರುಣ, ಎಂ ಚುಬ ಎಒ, ಎ ಪಿ ಅಬ್ದುಲ್ಲಾಕುಟ್ಟಿ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರುಗಳನ್ನಾಗಿ ನೇಮಕಗೊಳಿಸಲಾಗಿದೆ.

ಪಕ್ಷದ ಒಬಿಸಿ ಮೋರ್ಚಾ ಮುಖ್ಯಸ್ಥರಾಗಿ ಕೆ. ಲಕ್ಷ್ಮಣ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಜಮಾಲ್ ಸಿದ್ಧೀಖಿ ಹಾಗೂ ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷರಾಗಿ ಲಾಲ್ ಸಿಂಗ್ ಆರ್ಯ ನೇಮಕಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News