ವಿಶ್ವಸಂಸ್ಥೆಯ ನಿರ್ಣಯ ಮಂಡಳಿಯಿಂದ ಇನ್ನೆಷ್ಟು ದಿನ ಭಾರತವನ್ನು ಹೊರಗಿಡಲಾಗುತ್ತದೆ?

Update: 2020-09-26 16:06 GMT

ಹೊಸದಿಲ್ಲಿ,ಸೆ.26: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ರಾಷ್ಟ್ರವಾಗಿ ಭಾರತದ ಸೇರ್ಪಡೆಗಾಗಿ ಶನಿವಾರ ಬಲವಾಗಿ ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು,ವಿಶ್ವಸಂಸ್ಥೆಯ ನಿರ್ಧಾರಗಳನ್ನು ಕೈಗೊಳ್ಳುವ ಸಂರಚನೆಗಳಿಂದ ಭಾರತವನ್ನು ಇನ್ನೆಷ್ಟು ಕಾಲ ಹೊರಗಿಡಲಾಗುತ್ತದೆ ಎಂದು ಖಾರವಾಗಿ ಪ್ರಶ್ನಿಸಿದರು.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 75ನೇ ಮಹಾಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ,ಈ ಜಾಗತಿಕ ಸಂಸ್ಥೆಗೆ ದೇಶದ ಕೊಡುಗೆಗಳನ್ನು ಗಮನಿಸಿರುವ ಪ್ರತಿಯೊಬ್ಬ ಭಾರತೀಯನೂ ವಿಶ್ವಸಂಸ್ಥೆಯಲ್ಲಿ ಭಾರತದ ವಿಸ್ತರಿತ ಪಾತ್ರಕ್ಕಾಗಿ ಹಾತೊರೆಯುತ್ತಿದ್ದಾನೆ ಎಂದು ಹೇಳಿದರು. ಕೊರೋನ ವೈರಸ್ ಸಾಂಕ್ರಾಮಿಕದ ನಡುವೆಯೇ ವರ್ಚುವಲ್ ರೂಪದಲ್ಲಿ ನಡೆಯುತ್ತಿರುವ ಮಹಾಧಿವೇಶನಕ್ಕಾಗಿ ನ್ಯೂಯಾರ್ಕ್‌ನಲ್ಲಿಯ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಸಭಾಂಗಣದಲ್ಲಿ ಪ್ರಸಾರಿಸಲಾದ ತನ್ನ ಪೂರ್ವ ಮುದ್ರಿತ ವೀಡಿಯೊ ಭಾಷಣದಲ್ಲಿ ವಿಶ್ವಸಂಸ್ಥೆಯ ಸುಧಾರಣಾ ಪ್ರಕ್ರಿಯೆ ಎಂದಾದರೂ ತನ್ನ ತಾರ್ಕಿಕ ಅಂತ್ಯವನ್ನು ಕಾಣುತ್ತದೆಯೇ ಎಂದು ಭಾರತೀಯರು ಕಳವಳಗೊಂಡಿದ್ದಾರೆ ಎಂದು ಮೋದಿ ಹೇಳಿದರು.

ವಾಸ್ತವದಲ್ಲಿ ಭಾರತದ 130 ಕೋಟಿ ಜನರು ವಿಶ್ವಸಂಸ್ಥೆಯಲ್ಲಿ ಇಟ್ಟಿರುವ ವಿಶ್ವಾಸ ಮತ್ತು ಗೌರವಕ್ಕೆ ಸಾಟಿಯಿಲ್ಲ ಎಂದು ತನ್ನ 22 ನಿಮಿಷಗಳ ಹಿಂದಿ ಭಾಷಣದಲ್ಲಿ ಹೇಳಿದ ಅವರು,ನಾವು ಬಲಿಷ್ಠರಾಗಿದ್ದಾಗ ನಾವೆಂದೂ ವಿಶ್ವಕ್ಕೆ ಬೆದರಿಕೆಯಾಗಿರಲಿಲ್ಲ. ನಾವು ದುರ್ಬಲರಾಗಿದ್ದಾಗ ನಾವೆಂದೂ ವಿಶ್ವಕ್ಕೆ ಹೊರೆಯಾಗಿರಲಿಲ್ಲ. ನೂರಾರು ಭಾಷೆಗಳು,ನೂರಾರು ಉಪಭಾಷೆಗಳು ಮತ್ತು ಹಲವಾರು ಸಿದ್ಧಾಂತಗಳನ್ನು ಹೊಂದಿರುವ ಮತ್ತು ಶತಮಾನಗಳಿಂದಲೂ ಪ್ರಮುಖ ಜಾಗತಿಕ ಆರ್ಥಿಕತೆಯಾಗಿರುವ ಹಾಗೂ ನೂರಾರು ವರ್ಷಗಳ ಕಾಲ ವಿದೇಶಿ ಆಡಳಿತವನ್ನು ಸಹಿಸಿರುವ ಒಂದು ದೇಶದಲ್ಲಿ ನಡೆಯುತ್ತಿರುವ ಪರಿವರ್ತನಾತ್ಮಕ ಬದಲಾವಣೆಗಳು ಬಹ್ವಂಶ ಜಗತ್ತಿನ ಮೇಲೆ ಪರಿಣಾಮವನ್ನು ಬೀರುತ್ತಿರುವಾಗ ಆ ದೇಶವು ನಿರ್ದಿಷ್ಟವಾಗಿ ಎಷ್ಟು ಕಾಲ ಕಾಯಬೇಕು ಎಂದು ಪ್ರಶ್ನಿಸಿದರು.

ದಶಕಗಳ ಕಾಲ ಸುಮಾರು 50 ವಿಶ್ವಸಂಸ್ಥೆ ಶಾಂತಿ ಅಭಿಯಾನಗಳಿಗೆ ಭಾರತದ ಕೊಡುಗೆಗಳನ್ನೂ ಅವರು ಪ್ರಸ್ತಾಪಿಸಿದರು.

ಚೀನಾವನ್ನು ಹೊರತುಪಡಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಎಲ್ಲ ನಾಲ್ಕೂ ಖಾಯಂ ಸದಸ್ಯ ರಾಷ್ಟ್ರಗಳು ಮಂಡಳಿಯಲ್ಲಿ ಖಾಯಂ ಸ್ಥಾನಕ್ಕಾಗಿ ಭಾರತದ ಉಮೇದುವಾರಿಕೆಯನ್ನು ಬೆಂಬಲಿಸಿವೆ.

2021,ಜ.1ರಂದು ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಚುನಾಯಿತ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಎರಡು ವರ್ಷಗಳ ಅವಧಿಗೆ ಅಧಿಕಾರವನ್ನು ಸ್ವೀಕರಿಸುವ ಮುನ್ನ ಮೋದಿಯವರ ಖಡಕ್ ಮಾತುಗಳು ಹೊರಹೊಮ್ಮಿವೆ.

 ವಿಶ್ವಸಂಸ್ಥೆಯು ತನ್ನನ್ನು ಬದಲಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದ ಅವರು,ನಾವಿಂದು ವಿಭಿನ್ನ ಯುಗದಲ್ಲಿ ಒಂದಾಗಿದ್ದೇವೆ. ಆಗಿನ ಸಂದರ್ಭಗಳಡಿ ಸ್ಥಾಪನೆಯಾಗಿದ್ದ ವಿಶ್ವಸಂಸ್ಥೆಯು ಇಂದಿಗೂ ಸುಸಂಗತವಾಗಿದೆಯೇ ಎಂಬ ಪ್ರಶ್ನೆ ಇಡೀ ಜಾಗತಿಕ ಸಮುದಾಯವನ್ನು ಕಾಡುತ್ತಿದೆ. ಕಳೆದ 75 ವರ್ಷಗಳಲ್ಲಿ ವಿಶ್ವಸಂಸ್ಥೆಯು ಬಹಳಷ್ಟು ಸಾಧನೆಗಳನ್ನು ಮಾಡಿದೆ. ವಿಶ್ವಸಂಸ್ಥೆಯ ಎದುರಿನಲ್ಲಿ ಗಂಭೀರ ಆತ್ಮವಿಮರ್ಶೆಗೆ ಕರೆ ನೀಡುವ ಅನೇಕ ಉದಾಹರಣೆಗಳೂ ಇವೆ. ವಿಶ್ವಸಂಸ್ಥೆಯು ತನ್ನನ್ನು ತಾನು ಬದಲಿಸಿಕೊಳ್ಳುವುದು ಈಗಿನ ಅಗತ್ಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News