ಸಿಬಿಐಯಿಂದ 9 ಪೊಲೀಸರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

Update: 2020-09-26 16:22 GMT

ಹೊಸದಿಲ್ಲಿ, ಸೆ. 26: ತಮಿಳುನಾಡಿನ ತಂದೆ ಹಾಗೂ ಮಗನ ಕಸ್ಟಡಿ ಸಾವಿನ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಮೂರು ತಿಂಗಳ ಬಳಿಕ ಸಿಬಿಐ ಕಸ್ಟಡಿ ಸಾವು ಸಂಭವಿಸಿದ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದ 9 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ದೋಷಾರೋಪ ಪಟ್ಟಿ ಇನ್ಸ್‌ಪೆಕ್ಟರ್/ಎಸ್‌ಎಚ್‌ಒ, ಇಬ್ಬರು ಎಸ್‌ಐ, ಇಬ್ಬರು ಹೆಡ್ ಕಾನ್ಸ್‌ಟೇಬಲ್‌ಗಳು ಹಾಗೂ ನಾಲ್ವರು ಕಾನ್ಸ್‌ಟೇಬಲ್‌ಗಳನ್ನು ಒಳಗೊಂಡಿದೆ. ಇವರು ತಮಿಳುನಾಡಿನ ಸಾತಂಕುಲಂ ಪೊಲೀಸ್ ಠಾಣೆಗೆ ನಿಯೋಜಿತರಾಗಿದ್ದರು. ಇವರನ್ನು ತನಿಖೆಯ ಸಂದರ್ಭ ಬಂಧಿಸಲಾಗಿತ್ತು ಹಾಗೂ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಇನ್ನೋರ್ವ ಆರೋಪಿ ಆಗಿನ ಸಬ್ ಇನ್ಸ್‌ಪೆಕ್ಟರ್ ತನಿಖೆಯ ಸಂದರ್ಭ ಮೃತಪಟ್ಟಿದ್ದರು. ತಮಿಳುನಾಡಿನ ಕೋವಿಲ್‌ಪಟ್ಟಿಯ ಪಿ. ಜಯರಾಜ್ ಹಾಗೂ ಜೆ. ಬೆನ್ನಿಕ್ಸ್ (ತಂದೆ ಹಾಗೂ ಮಗ)ರ ಕಸ್ಟಡಿ ಸಾವಿಗೆ ಸಂಬಂಧಿಸಿ ಜುಲೈ 7ರಂದು ಸಿಬಿಐ ಎರಡು ಪ್ರಕರಣಗಳನ್ನು ದಾಖಲಿಸಿತ್ತು. ರಾಜ್ಯ ಸರಕಾರದ ಮನವಿ ಹಾಗೂ ಕೇಂದ್ರ ಸರಕಾರದ ಅಧಿಸೂಚನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ತನಿಖೆಗೆ ಸಿಬಿಐ ತಂಡ ಮಧುರೈಯಲ್ಲಿ ಬೀಡು ಬಿಟ್ಟಿದೆ. ಸಿಬಿಐ ತನಿಖೆಯ ಪ್ರಕಾರ, ತಂದೆ ಹಾಗೂ ಮಗನನ್ನು ಜೂನ್ 19ರಂದು ಪೋಲಿಸರು ಬಂಧಿಸಿದ್ದರು. ಅನಂತರ ಸಾತಂಕುಲಂ ಪೊಲೀಸ್ ಠಾಣೆಯಲ್ಲಿ ಅವರಿಬ್ಬರ ಮೇಲೆ ದೌರ್ಜನ್ಯ ಎಸಗಿದ್ದರು. ಇದರಿಂದ ಜೂನ್ 22 ಹಾಗೂ 23ರ ಮಧ್ಯರಾತ್ರಿ ಅವರಿಬ್ಬರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಇತರ ವ್ಯಕ್ತಿಗಳ ಪಾತ್ರದ ಬಗ್ಗೆ ಕೂಡ ಸಿಬಿಐ ತನಿಖೆ ನಡೆಸುತ್ತಿದೆ. ತಂದೆ ಮತ್ತು ಮಗ ಬಹು ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಸಿಬಿಐ ಆಗಸ್ಟ್‌ನಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News