ಸಿಂಧಿಯಾರ ಇಬ್ಬರು ನಿಷ್ಠರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ

Update: 2020-09-26 17:19 GMT

ಹೊಸದಿಲ್ಲಿ, ಸೆ. 26: ಬಿಹಾರ ಚುನಾವಣೆಯ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸುವಾಗ ಉಪ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸದೇ ಇರುವುದರಿಂದ ಮಧ್ಯಪ್ರದೇಶದ 28 ವಿಧಾನ ಸಭಾ ಸ್ಥಾನಗಳ ನಿರ್ಣಾಯಕ ಉಪ ಚುನಾವಣೆ ಅಕ್ಟೋಬರ್‌ಗಿಂತಲೂ ತಡವಾಗುವ ಸಾಧ್ಯತೆ ಇದೆ. ಇದು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ಇಬ್ಬರು ನಿಷ್ಠರ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮೂಡುವಂತೆ ಮಾಡಿದೆ. ರಾಜ್ಯ ಸಚಿವರಾದ ತುಲ್ಸಿ ಸಿಲಾವಟ್ ಹಾಗೂ ಗೋವಿಂದ ಸಿಂಗ್ ರಜಪೂತ್ ಅವರು ಅಕ್ಟೋಬರ್ 21ಕ್ಕಿಂತ ಮುನ್ನ ವಿಧಾನ ಸಭೆ ಚುನಾವಣೆಯಲ್ಲಿ ಆಯ್ಕೆಯಾಗುವ ಸಾಧ್ಯತೆ ಇಲ್ಲವೆಂದು ಕಾಣುತ್ತದೆ. ಇದರಿಂದ ಅವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ಅಕ್ಟೋಬರ್ 21ಕ್ಕೆ ಅವರಿಬ್ಬರು ವಿಧಾನ ಸಭೆ ಸದಸ್ಯ ಅಥವಾ ಎಂಎಲ್‌ಸಿಯಾಗದೆ ಸಚಿವ ಸ್ಥಾನದ ತಮ್ಮ 6 ತಿಂಗಳ ಅವಧಿಯನ್ನು ಪೂರೈಸಲಿದ್ದಾರೆ. ಸಿಲಾವಟ್ ಅವರು ಜಲ ಸಂಪನ್ಮೂಲ ಖಾತೆಯ ಸಚಿವರಾಗಿದ್ದರೆ, ರಜಪೂತ್ ಕಂದಾಯ ಖಾತೆಯ ಸಚಿವ. ಇಬ್ಬರೂ ನಾಯಕರು ಮಾರ್ಚ್‌ನಲ್ಲಿ ಸಿಂಧಿಯಾ ಅವರೊಂದಿಗೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ್ದರು. ಇದರಿಂದ 15 ತಿಂಗಳ ಕಮಲ್‌ನಾಥ್ ನೇತೃತ್ವದ ಸರಕಾರ ಉರುಳಿತ್ತು. ಶಿವರಾಜ್ ಸಿಂಗ್ ಚೌಹಾಣ್ ಅವರು ಮಾರ್ಚ್‌ನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎಪ್ರಿಲ್ 21ರಂದು ಸಂಪುಟವನ್ನು ವಿಸ್ತರಿಸಿದ್ದರು. ಈ ಸಂದರ್ಭ ಮೂವರು ಬಿಜೆಪಿ ನಾಯಕರಾದ ನರೋತ್ತಮ್ ಮಿಶ್ರಾ, ಕಮಲ್ ಪಟೇಲ್, ಮನೀಶ್ ಸಿಂಗ್ ಅವರೊಂದಿಗೆ ಸಿಲಾವಟ್ ಹಾಗೂ ರಜಪೂತ್ ಅವರನ್ನು ಸೇರಿಸಿಕೊಂಡಿದ್ದರು. ನಿಯಮದ ಪ್ರಕಾರ ಸಿಲಾವತ್ ಹಾಗೂ ರಜಪೂತ್ ಅಕ್ಟೋಬರ್ 21ರಂದು ವಿಧಾನ ಸಭೆ ಸದಸ್ಯರಾಗಿ ಆಯ್ಕೆಯಾಗಬೇಕು. ಶಾಸಕ ಅಥವಾ ವಿಧಾನ ಪರಿಷತ್ ಸದಸ್ಯರಲ್ಲದ ಯಾವುದೇ ಸಚಿವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 6 ತಿಂಗಳ ಒಳಗೆ ಶಾಸಕ ಅಥವಾ ಎಂಎಲ್‌ಸಿಯಾಗಿ ಆಯ್ಕೆಯಾಗಬೇಕು. ಸಿಲಾವಟ್ ಹಾಗೂ ರಜಪೂತ್ ಅವರ 6 ತಿಂಗಳ ಅವಧಿ ಅಕ್ಟೋಬರ್ 21ರಂದು ಕೊನೆಗೊಳ್ಳಲಿದೆ. ಅಕ್ಟೋಬರ್ 21ರ ಒಳಗೆ ಚುನಾವಣೆ ನಡೆಯದೇ ಇದ್ದರೆ, ಸಿಲಾವತ್ ಹಾಗೂ ರಜಪೂತ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News