ದ್ವಿಪಕ್ಷೀಯ ಸಹಕಾರ ಸಂಬಂಧ ವೃದ್ಧಿಗೆ ಆದ್ಯತೆ ನೀಡಲು ಭಾರತ-ಶ್ರೀಲಂಕಾ ನಿರ್ಧಾರ

Update: 2020-09-26 17:24 GMT

ಹೊಸದಿಲ್ಲಿ, ಸೆ.26: ಪ್ರಮುಖ ವಿಷಯಗಳಲ್ಲಿ ಸಹಕಾರ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವುದೂ ಸೇರಿದಂತೆ ದ್ವಿಪಕ್ಷೀಯ ಸಹಕಾರದ ಬಲವರ್ಧನೆಯ ಉದ್ದೇಶದಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಪ್ರಧಾನಿ ಮಹೀಂದ್ರ ರಾಜಪಕ್ಸ ನಡುವೆ ಶನಿವಾರ ದ್ವಿಪಕ್ಷೀಯ ಶೃಂಗ ಸಭೆ ನಡೆಯಿತು.

ಆನ್‌ಲೈನ್(ವರ್ಚುವಲ್) ಮೂಲಕ ನಡೆದ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜಪಕ್ಸ ಸರಕಾರದ ಕಾರ್ಯನೀತಿಗೆ ದೊರೆತ ಜನಬೆಂಬಲದಿಂದ ಶ್ರೀಲಂಕಾದಲ್ಲಿ ಆಡಳಿತಾರೂಢ ಪಕ್ಷ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿರುವುದು ಉಭಯ ರಾಷ್ಟ್ರಗಳ ನಡುವಿನ ಸಹಕಾರ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿಯಾಗಿದೆ ಎಂದರು. ಎರಡೂ ದೇಶಗಳ ಜನತೆ ಹೊಸ ನಿರೀಕ್ಷೆ ಮತ್ತು ಭರವಸೆಯೊಂದಿಗೆ ನಮ್ಮತ್ತ ನೋಡುತ್ತಿದ್ದಾರೆ. ಭಾರತ ಸರಕಾರ ‘ನೆರೆಹೊರೆ ಪ್ರಥಮ’ ಕಾರ್ಯನೀತಿಯಂತೆ, ಶ್ರೀಲಂಕಾದೊಂದಿಗಿನ ಸಹಕಾರ ಸಂಬಂಧಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ, ಸಾಗರ್(ಸೆಕ್ಯುರಿಟಿ ಆ್ಯಂಡ್ ಗ್ರೋತ್ ಫಾರ್ ಆಲ್ ಇನ್ ದಿ ರೀಜನ್) ನೀತಿಯಂತೆ ಉಭಯ ದೇಶಗಳ ನಡುವಿನ ಸಹಕಾರ ಸಂಬಂಧ ವೃದ್ಧಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನೆರೆ ದೇಶದ ಮುಖಂಡರೊಂದಿಗೆ ಪ್ರಧಾನಿ ಮೋದಿ ನಡೆಸಿದ ಪ್ರಥಮ ಆನ್‌ಲೈನ್ ಸಭೆ ಇದಾಗಿದೆ. ಅಂತೆಯೇ, ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಜಪಕ್ಸೆ ವಿದೇಶದ ಮುಖಂಡರೊಂದಿಗೆ ನಡೆಸಿದ ಪ್ರಥಮ ರಾಜತಾಂತ್ರಿಕ ಸಭೆಯಾಗಿದೆ. ರಕ್ಷಣೆ ಮತ್ತು ವ್ಯಾಪಾರ ಕ್ಷೇತ್ರ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಸಂಬಂಧ ವೃದ್ಧಿಸುವ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News