ಪ್ರತ್ಯೇಕ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಆಂಗ್ಲೊ ಇಂಡಿಯನ್ ಸಮುದಾಯದ ಆಗ್ರಹ

Update: 2020-09-26 17:25 GMT

ಚೆನ್ನೈ, ಸೆ.26: 10 ವರ್ಷದ ಅವಧಿಗೆ ಪ್ರತ್ಯೇಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಮತ್ತು ಸಂಸತ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಎಂದು ಆಂಗ್ಲೊ ಇಂಡಿಯನ್ ಸಮುದಾಯ ಕೇಂದ್ರ ಸರಕಾರವನ್ನು ಆಗ್ರಹಿಸಿದೆ. ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ ಸೌಲಭ್ಯವನ್ನು 10 ವರ್ಷಕ್ಕೆ ವಿಸ್ತರಿಸುವ ಮಸೂದೆಗೆ 2019ರ ಡಿಸೆಂಬರ್‌ನಲ್ಲಿ ಲೋಕಸಭೆ ಅವಿರೋಧವಾಗಿ ಅಂಗೀಕಾರ ನೀಡಿತ್ತು. ಆದರೆ ಇದರ ಸೌಲಬ್ಯ ಆಂಗ್ಲೊ ಇಂಡಿಯನ್ ಸಮುದಾಯದವರಿಗೆ ಲಭಿಸಿಲ್ಲ. ದೇಶದಲ್ಲಿ ಸಮುದಾಯದವರ ಪ್ರಾಮುಖ್ಯತೆ ಕ್ಷೀಣಿಸುತ್ತಿರುವುದರಿಂದ ಕೇಂದ್ರ ಸರಕಾರ ಪ್ರತ್ಯೇಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಆಂಗ್ಲೋ ಇಂಡಿಯನ್ ಸಂಘಟನೆಗಳ ಒಕ್ಕೂಟ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದರೂ ಆಂಗ್ಲೊ ಇಂಡಿಯನ್ ಸಮುದಾಯದವರು ವಿಭಿನ್ನ ಸಂಸ್ಕೃತಿಯನ್ನು ಹೊಂದಿದ್ದಾರೆ. ಆದ್ದರಿಂದ 1992ರ ‘ನ್ಯಾಷನಲ್ ಕಮಿಷನ್ ಫಾರ್ ಮೈನಾರಿಟೀಸ್ ಆ್ಯಕ್ಟ್’ಗೆ ತಿದ್ದುಪಡಿ ತರುವ ಮೂಲಕ ಪ್ರತ್ಯೇಕ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದೆ.

ಅಲ್ಲದೆ, ಸಂಸತ್ತಿನಲ್ಲಿ ಮತ್ತು ವಿಧಾನಸಭೆಯಲ್ಲಿ ಆಂಗ್ಲೊ ಇಂಡಿಯನ್ ಸಮುದಾಯಕ್ಕೆ ಕಲ್ಪಿಸಲಾಗಿದ್ದ ವಿಶೇಷ ಮೀಸಲಾತಿ ಸೌಲಭ್ಯ 2020ರ ಜನವರಿ 26ರಿಂದ ರದ್ದಾಗಿದ್ದು ಅದನ್ನು ಮುಂದಿನ 10 ವರ್ಷದವರೆಗೆ ಮುಂದುವರಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News