ಶಿಸ್ತು ಉಲ್ಲಂಘನೆ: ಪಕ್ಷದ ಶಾಸಕನಿಗೇ ಶೋಕಾಸ್ ನೋಟಿಸ್ ನೀಡಿದ ಬಿಜೆಪಿ!

Update: 2020-09-27 05:25 GMT

ಡೆಹ್ರಾಡೂನ್, ಸೆ.27: ಉತ್ತರಾಖಂಡದ ಲೋಹಘಾಟ್ ಶಾಸಕ ಪುರಾಣ್ ಸಿಂಗ್ ಫರ್ತಿಯಾಲ್ ಅವರಿಗೆ ಬಿಜೆಪಿ ರಾಜ್ಯ ಘಟಕ ಶನಿವಾರ, ಶಿಸ್ತು ಉಲ್ಲಂಘನೆ ಆರೋಪದಲ್ಲಿ ಶೋಕಾಸ್ ನೋಟಿಸ್ ನೀಡಿದೆ.

ಇತ್ತೀಚೆಗೆ ಮುಕ್ತಾಯವಾದ ವಿಧಾನಸಭಾ ಅಧಿವೇಶನದಲ್ಲಿ ಅವರು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯಮಾವಳಿ-58ರ ಅನ್ವಯ ವಿಷಯ ಪ್ರಸ್ತಾಪಿಸಿದ್ದರು.
"ಶಾಸಕರ ಇತ್ತೀಚಿನ ನಡತೆಯು ಅಶಿಸ್ತಿನ ವರ್ಗದಲ್ಲಿ ಸೇರುತ್ತದೆ. ಈ ಕಾರಣಕ್ಕಾಗಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕುಲದೀಪ್ ಕುಮಾರ್ ಹೇಳಿದ್ದಾರೆ.

ಚಂಪಾವತ್ ಜಿಲ್ಲೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆಯಾಗಬೇಕು ಎಂದು ಪುರಾಣ್ ಸಿಂಗ್ ಆಗ್ರಹಿಸಿ, ವಿಷಯ ಪ್ರಸ್ತಾಪಿಸಿದ್ದರು. ಇದನ್ನು ಅಶಿಸ್ತು ಎಂದು ಪರಿಗಣಿಸಿದ ಪಕ್ಷ ನೋಟಿಸ್ ನೀಡಿದ್ದು, ಏಳು ದಿನಗಳ ಒಳಗಾಗಿ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಿದೆ.

ಸೆಪ್ಟಂಬರ್ 23ರಂದು ಸದನದಲ್ಲಿ ಮಾತನಾಡಿದ ಪುರಾಣ್ ಸಿಂಗ್, ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಗುಡುಗಿದ್ದರು. ನಮ್ಮದೇ ಸರಕಾರ ನನ್ನ ಮೇಲೆ ಒತ್ತಡ ಹೇರುತ್ತಿದ್ದು, ಈ ವಿಷಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮುಂದೆ ಪ್ರಸ್ತಾವಿಸುವುದಾಗಿಯೂ ಸ್ಪಷ್ಟಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News