ಕುತೂಹಲ ಕೆರಳಿಸಿದ ಸಂಜಯ ರಾವತ್-ದೇವೇಂದ್ರ ಫಡ್ನವಿಸ್ ಭೇಟಿ

Update: 2020-09-27 06:34 GMT

ಮುಂಬೈ, ಸೆ.27: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಶಿವಸೇನೆಯ ನಾಯಕ ಸಂಜಯ ರಾವತ್ ಶನಿವಾರ ಭೇಟಿಯಾಗಿದ್ದಾರೆ. ಈ ಇಬ್ಬರು ನಾಯಕರ ಭೇಟಿ ಹಲವು ಊಹಾಪೋಹಕ್ಕೆ ಕಾರಣವಾಗಿದ್ದು, ನಮ್ಮ ಭೇಟಿಯಲ್ಲಿ ರಾಜಕೀಯವಿಲ್ಲ ಎಂದು ಉಭಯ ನಾಯಕರೂ ಸ್ಪಷ್ಟಪಡಿಸಿದ್ದಾರೆ.

 ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಹಾಗೂ ನಟಿ ಕಂಗನಾ ರಣಾವತ್ ಕಚೇರಿಯ ಧ್ವಂಸಕ್ಕೆ ಸಂಬಂಧಿಸಿ ಪರಸ್ಪರ ವಾಗ್ದಾಳಿ ನಡೆಸಿದ್ದ ರಾವತ್ ಹಾಗೂ ಫಡ್ನವಿಸ್ ಪಶ್ಚಿಮ ಉಪನಗರದ ಐಷಾರಾಮಿ ಹೊಟೇಲ್‌ನಲ್ಲಿ ಭೇಟಿಯಾಗಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.

 ಫಡ್ನವಿಸ್‌ರೊಂದಿಗಿನ ಭೇಟಿಯನ್ನು ಖಚಿತಪಡಿಸಿದ ರಾವತ್, ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಗೆ ಸಂದರ್ಶನ ನಡೆಸಲು ಅವರನ್ನು ಭೇಟಿಯಾಗಿದ್ದೇನೆ. ಈ ವಿಚಾರವು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ತಿಳಿದಿದೆ ಎಂದರು.

 "ದೇವೇಂದ್ರ ಫಡ್ನವಿಸ್ ನಮ್ಮ ಶತ್ರುವಲ್ಲ. ನಾವು ಅವರೊಂದಿಗೆ ಕೆಲಸ ಮಾಡಿದ್ದೇವೆ. ಸಾಮ್ನಾದ ಸಂದರ್ಶನಕ್ಕಾಗಿ ಅವರನ್ನು ಭೇಟಿಯಾಗಿದ್ದೇನೆ. ಇದೊಂದು ಪೂರ್ವ ನಿರ್ಧರಿತ ಭೇಟಿಯಾಗಿತ್ತು. ಈ ಎಲ್ಲ ವಿಚಾರವು ಉದ್ದವ್ ಠಾಕ್ರೆಗೆ ಗೊತ್ತಿದೆ''ಎಂದು ಸುದ್ದಿಗಾರರಿಗೆ ರಾವತ್ ತಿಳಿಸಿದರು.

"ಫಡ್ನವಿಸ್‌ರನ್ನು ಭೇಟಿಯಾಗಿರುವುದು ಅಪರಾಧವೇ. ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ. ಇದೀಗ ಅವರು ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದಾರೆ. ನಮ್ಮಿಬ್ಬರ ಸಿದ್ದಾಂತ ಬೇರೆ ಬೇರೆ ಇದೆ.ಆದರೆ, ನಾವು ವೈರಿಗಳಲ್ಲ'' ಎಂದರು.

ಈ ಇಬ್ಬರು ನಾಯಕರ ಭೇಟಿಯಲ್ಲಿ ರಾಜಕೀಯ ಆಯಾಮವಿಲ್ಲ ಎಂದು ಬಿಜೆಪಿ ವಕ್ತಾರ ಕೇಶವ್ ಉಪಾಧ್ಯಾಯ ಟ್ವೀಟ್ ಮಾಡಿದ್ದಾರೆ. ರಾವತ್ ಅವರು ಫಡ್ನವಿಸ್‌ರನ್ನು ಶಿವಸೇನೆಯ ಮುಖವಾಣಿ  ಸಾಮ್ನಾಕ್ಕಾಗಿ ಸಂದರ್ಶನ ನಡೆಸಲು ಬಯಸಿದ್ದರು. ಬಿಹಾರ ಚುನಾವಣೆ ಪ್ರಚಾರದಿಂದ ವಾಪಸ್ ಆದ ಬಳಿಕ ಸಂದರ್ಶನಕ್ಕೆ ಹಾಜರಾಗುವುದಾಗಿ ಫಡ್ನವಿಸ್ ಭರವಸೆ ನೀಡಿದ್ದರು ಉಪಾಧ್ಯಾಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News