ತನ್ನ ವಿರುದ್ಧದ ಅಪಪ್ರಚಾರಗಳ ಹಿಂದೆ ಪ್ರಧಾನಿ ಕಚೇರಿಯ ಅಧಿಕಾರಿ ಎಂದ ಸುಬ್ರಮಣಿಯನ್ ಸ್ವಾಮಿ

Update: 2020-09-27 08:09 GMT

ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಮತ್ತು ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಸಮರ ಸಾರಿರುವ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ಕಚೇರಿಯನ್ನೂ ವಿವಾದಕ್ಕೆ ಎಳೆದಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡ ತೇಜಿಂದರ್ ಸಿಂಗ್ ಬಗ್ಗಾ ಅವರು ಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು, ಸ್ವಾಮಿಯವರು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ಪರವಾಗಿ ಬಿಜೆಪಿಗೆ ಹಳ್ಳ ತೋಡಿದ್ದರು ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿ ಹೊಸ ತಂಡ ಘೋಷಣೆ ಬೆನ್ನಲ್ಲೇ ರವಿವಾರ ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಸ್ವಾಮಿ, ಐಟಿ ಮುಖ್ಯಸ್ಥರಾಗಿ ಮುಂದುವರಿದಿರುವ ಮಾಳವೀಯ ವಿರುದ್ಧ ಬಹಿರಂಗ ಸಮರ ಸಾರಿದ್ದರು. ಹಿಂದೆ ಮಾಳವೀಯ ವಿರುದ್ಧ ಪರೀಕ್ಷಾರ್ಥವಾಗಿ ಟ್ವೀಟ್ ಮಾಡಿದ್ದಾಗಿ ಸ್ವಾಮಿ ಹೇಳಿದ್ದರು. ನಕಲಿ ಟ್ವೀಟ್‍ಗಳ ಮೂಲಕ ಮಾಳವೀಯ ಹೆಸರು ಕೆಡಿಸುವ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸೆಪ್ಟೆಂಬರ್ 7ರಂದು ಸುಬ್ರಮಣಿಯನ್‍ಸ್ವಾಮಿ ಆರೋಪಿಸಿದ್ದರು. ಇದೀಗ ಪ್ರಧಾನಿ ಕಚೇರಿಯ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ವಿಶೇಷ ಕರ್ತವ್ಯಾಧಿಕಾರಿ ಹರೇನ್ ಜೋಶಿ ತಮ್ಮ ವಿರುದ್ಧ ನಕಲಿ ಟ್ವೀಟ್ ಅಭಿಯಾನ ನಡೆಸಿದ್ದಾರೆ ಎಂದು ಸ್ವಾಮಿ ಆಪಾದಿಸಿದ್ದಾರೆ.

ಇದೀಗ ಮಾಳವೀಯ ಮರು ನೇಮಕಗೊಂಡಿದ್ದಾರೆ. ನಾನು ಈಗ ಇದನ್ನು ಹೇಳಲೇಬೇಕಾಗಿದೆ: ಮಾಳವೀಯ ವಿರುದ್ಧದ ನನ್ನ ಹಿಂದಿನ ಟ್ವೀಟ್‍ಗಳು, ಅವರ ವಿರುದ್ಧದ ಟೀಕೆಗಳಿಗೆ ಕೂಡಾ ಅವರು ನಕಲಿ ಐಡಿ ಟ್ವೀಟ್‍ಗಳನ್ನು ಬಳಸುತ್ತಾರೆಯೇ ಎಂದು ಪರೀಕ್ಷಿಸುವ ಸಲುವಾಗಿ ಮಾಡಿದ ಟ್ವೀಟ್‍ಗಳಾಗಿದ್ದವು. ಇದೀಗ ಸ್ಪಷ್ಟತೆ ಸಿಕ್ಕಿದೆ. ಪ್ರಧಾನಿ ಕಚೇರಿಯ ಹರೇನ್ ಜೋಶಿ ಇದರ ಹಿಂದಿದ್ದಾರೆ. ಇದನ್ನು ದಾಖಲೆ ಸಹಿತ ಎರಡು ವಾರ ಹಿಂದೆಯೇ ಪ್ರಧಾನಿಗೆ ಪತ್ರ ಬರೆದು ಗಮನಕ್ಕೆ ತಂದಿರುವುದಾಗಿ ಸ್ಪಷ್ಟಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News