ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ಬ್ಯಾರಟ್‌ರನ್ನು ನೇಮಿಸಿದ ಟ್ರಂಪ್: ನೇಮಕಕ್ಕೆ ಬೈಡನ್ ಆಕ್ಷೇಪ

Update: 2020-09-27 15:30 GMT
ಜೋ ಬೈಡನ್

ವಾಶಿಂಗ್ಟನ್, ಸೆ. 27: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಆ್ಯಮಿ ಕಾನಿ ಬ್ಯಾರೆಟ್‌ರನ್ನು ದೇಶದ ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ನೇಮಿಸಿದ್ದಾರೆ. ಇತ್ತೀಚೆಗೆ ನಿಧನರಾಗಿರುವ ನ್ಯಾಯಾಧೀಶೆ ರುತ್ ಬ್ಯಾಡರ್ ಗಿನ್ಸ್‌ಬರ್ಗ್‌ರ ಸ್ಥಾನದಲ್ಲಿ ಅವರ ನೇಮಕವಾಗಿದೆ.

ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ಬ್ಯಾರೆಟ್‌ರ ನೇಮಕವನ್ನು ಟ್ರಂಪ್ ಶ್ವೇತಭವನದಲ್ಲಿ ನಡೆದ ಸಮಾರಂಭವೊಂದರಲ್ಲಿ ಘೋಷಿಸಿದರು. ‘‘ಬ್ಯಾರೆಟ್ ನಮ್ಮ ದೇಶದ ಅತ್ಯಂತ ಮೇಧಾವಿ ಹಾಗೂ ಪ್ರತಿಭಾವಂತ ನ್ಯಾಯಾಧೀಶರ ಪೈಕಿ ಒಬ್ಬರು’’ ಎಂಬುದಾಗಿ ಈ ಸಂದರ್ಭದಲ್ಲಿ ಟ್ರಂಪ್ ಬಣ್ಣಿಸಿದರು.

48 ವರ್ಷದ ಬ್ಯಾರೆಟ್‌ರ ನೇಮಕಾತಿ ಸಂಸತ್ತು ಕಾಂಗ್ರೆಸ್‌ನಲ್ಲಿ ಅನುಮೋದನೆಗೊಂಡರೆ, ಅವರು ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ಅತಿ ಕಿರಿಯ ನ್ಯಾಯಾಧೀಶರಾಗಲಿದ್ದಾರೆ.

 ಅವರ ನೇಮಕಾತಿಯಿಂದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಬಲಪಂಥೀಯರಿಗೆ 6-3ರ ಬಹುಮತ ಲಭಿಸಲಿದೆ. ಬ್ಯಾರೆಟ್, ಟ್ರಂಪ್ ಸುಪ್ರೀಂ ಕೋರ್ಟ್‌ಗೆ ಕಳುಹಿಸುತ್ತಿರುವ ಮೂರನೇ ನ್ಯಾಯಾಧೀಶರಾಗಲಿದ್ದಾರೆ ಹಾಗೂ ಆ ಮೂಲಕ ಸುಪ್ರೀಂ ಕೋರ್ಟ್ ಪೀಠದ ಸೈದ್ಧಾಂತಿಕ ತಕ್ಕಡಿಯನ್ನು ತಾನು ಪ್ರತಿನಿಧಿಸುವ ಸೈದ್ಧಾಂತಿಕ ನಿಲುವಿನ ಪರವಾಗಿ ತೂಗಲು ತುದಿಗಾಲಲ್ಲಿ ನಿಂತಿದ್ದಾರೆ.

ನೇಮಕಕ್ಕೆ ಚುನಾವಣೆವರೆಗೆ ಅನುಮೋದನೆ ಬೇಡ: ಸೆನೆಟ್‌ಗೆ ಬೈಡನ್ ಒತ್ತಾಯ

ಆ್ಯಮಿ ಕಾನಿ ಬ್ಯಾರೆಟ್‌ರನ್ನು ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ನೇಮಕಕ್ಕೆ ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆವರೆಗೆ ಅನುಮೋದನೆ ನೀಡದಂತೆ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಶನಿವಾರ ಸೆನೆಟ್‌ಗೆ ಕರೆ ನೀಡಿದ್ದಾರೆ.

‘‘ಅಮೆರಿಕದ ಜನತೆ ತಮ್ಮ ಮುಂದಿನ ಅಧ್ಯಕ್ಷ ಮತ್ತು ಮುಂದಿನ ಸಂಸತ್ತನ್ನು ಆರಿಸುವವರೆಗೆ ಈ ನೇಮಕಾತಿಗೆ ಅನುಮೋದನೆ ನೀಡಬಾರದು’’ ಎಂದು ಟ್ರಂಪ್ ನೇಮಕಾತಿಯನ್ನು ಘೋಷಿಸಿದ ಸ್ವಲ್ಪವೇ ಹೊತ್ತಿನ ಬಳಿಕ ಬೈಡನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News