ಸಂಜಯ್ ರಾವತ್- ಫಡ್ನವೀಸ್ ಭೇಟಿಯಲ್ಲಿ ರಾಜಕೀಯ ಉದ್ದೇಶವಿಲ್ಲ: ಶಿವಸೇನೆ

Update: 2020-09-27 16:40 GMT

ಮುಂಬೈ, ಸೆ.27: ಶಿವಸೇನೆಯ ಮುಖಂಡ ಸಂಜಯ್ ರಾವತ್ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಮಧ್ಯೆ ಶನಿವಾರ ನಡೆದ ಮಾತುಕತೆಯ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಗರಿಗೆದರಿರುವಂತೆಯೇ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಿವಸೇನೆ ಇದು ರಾಜಕೀಯ ಉದ್ದೇಶದ ಭೇಟಿಯಲ್ಲ. ಫಡ್ನವೀಸ್ ಶಿವಸೇನೆಯ ಮುಖವಾಣಿ ‘ಸಾಮ್ನ’ಕ್ಕೆ ಸಂದರ್ಶನ ನೀಡಲು ಆಗಮಿಸಿದ್ದರು ಎಂದು ಹೇಳಿದೆ.

ಮುಂಬೈಯ ಹೊರವಲಯದ ಐಶಾರಾಮಿ ಹೋಟೆಲ್‌ನಲ್ಲಿ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದರು. “ದೇವೇಂದ್ರ ಫಡ್ನವೀಸ್ ನಮ್ಮ ಶತ್ರುವಲ್ಲ. ನಾವು ಅವರೊಂದಿಗೆ ಕೆಲಸ ಮಾಡಿದ್ದೆವು. ಇದೊಂದು ಪೂರ್ವನಿರ್ಧರಿತ ಸಭೆಯಾಗಿದ್ದು ‘ಸಾಮ್ನಾ’ಕ್ಕಾಗಿ ಅವರನ್ನು ಸಂದರ್ಶನ ನಡೆಸಲಾಗಿದೆ. ಉದ್ಧವ್ ಠಾಕ್ರೆಗೂ ಈ ವಿಷಯ ತಿಳಿದಿದೆ” ಎಂದು ಸಭೆಯ ಬಳಿಕ ರಾವತ್ ಹೇಳಿದ್ದಾರೆ.

“ನಮ್ಮ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ನಾವು ಶತ್ರುಗಳಲ್ಲ. ಮಾಜಿ ಮುಖ್ಯಮಂತ್ರಿ, ಈಗ ವಿಧಾನಸಭೆಯಲ್ಲಿ ಪ್ರತಿಪಕ್ಷದ ಮುಖಂಡರಾಗಿರುವವರನ್ನು ಭೇಟಿ ಮಾಡುವುದು ಅಪರಾಧ ಕೃತ್ಯವಾಗುತ್ತದೆಯೇ ಎಂದು ರಾವತ್ ಪ್ರಶ್ನಿಸಿದ್ದಾರೆ. ಎನ್‌ಸಿಪಿ ಮುಖಂಡ ಶರದ್ ಪವಾರ್‌ರ ಸಂದರ್ಶನ ಮಾಡಿದ್ದೇನೆ, ಫಡ್ನವೀಸ್, ರಾಹುಲ್ ಗಾಂಧಿ, ಅಮಿತ್ ಶಾರ ಸಂದರ್ಶನವೂ ಪ್ರಕಟವಾಗಲಿದೆ” ಎಂದವರು ಹೇಳಿರುವುದಾಗಿ ವರದಿಯಾಗಿದೆ.

 ಸುಶಾಂತ್ ಸಿಂಗ್ ಸಾವಿನ ಪ್ರಕರಣ ಹಾಗೂ ಕಂಗನಾ ರಣಾವತ್ ಕಚೇರಿ ನೆಲಸಮಗೊಳಿಸಿದ ಪ್ರಕರಣ, ಉದ್ಧವ್ ಠಾಕ್ರೆ-ಬಿಜೆಪಿ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಭೇಟಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಜೊತೆಗೆ, ತಾನು ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದೇನೆ ಎಂಬ ಸಂದೇಶವನ್ನು ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ಗೆ ರವಾನಿಸುವ ಉದ್ದೇಶವೂ ಇದರಲ್ಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News