ಉಡುಪಿಯಲ್ಲಿ ಮಿಶ್ರ ಪ್ರತಿಕ್ರಿಯೆ: ರಸ್ತೆಗಿಳಿಯದ ಶೇ.75ರಷ್ಟು ಬಸ್‌ಗಳು

Update: 2020-09-28 07:23 GMT

ಉಡುಪಿ, ಸೆ.28: ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗೆ ಉಡುಪಿ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಳಿದಂತೆ ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಹೆಬ್ರಿ, ಬೈಂದೂರು, ಕಾಪು ತಾಲೂಕುಗಳಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಗಿಲ್ಲ.

ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಮಂಗಳೂರು, ಹೆಬ್ರಿ, ಕಾರ್ಕಳ, ಕುಂದಾಪುರ ಮಾರ್ಗಗಳಲ್ಲಿ ಓಡಾಡುವ ಎಪಿಎಂ, ಭಾರತಿ, ದುರ್ಗಾಂಬ, ಎಕೆ ಎಂಎಸ್ ಸೇರಿದಂತೆ ಶೇ.75ರಷ್ಟು ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದವು. ಅದೇರೀತಿ ಸಿಟಿಬಸ್‌ಗಳ ಪೈಕಿ ಕೆಲವು ಬಸ್‌ಗಳು ಇಂದು ಓಡಾಟ ನಡೆಸಿಲ್ಲ.

ನಗರದಲ್ಲಿ ಜನ ಸಂಚಾರ ತುಂಬಾ ವಿರಳವಾಗಿರುವುದರಿಂದ ಬಸ್‌ಗಳಲ್ಲಿ ಬೆರಳೆಣಿಕೆ ಸಂಖ್ಯೆಯ ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿರುವುದು ಕಂಡುಬಂತು. ಕೆಎಸ್ಸಾರ್ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸುತ್ತಿವೆ. ಬೆಂಗಳೂರು ಮಾರ್ಗವಾಗಿ ಸಂಚರಿಸುವ ಬಸ್‌ಗಳ ಸಂಖ್ಯೆಯನ್ನು ಕಡಿಮೆಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅನ್ನದಾತ ಆಟೋ ಯೂನಿಯನ್ ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ಈ ಸಂಘಟನೆಗಳ ರಿಕ್ಷಾಗಳು ಬಂದ್‌ನಲ್ಲಿ ಭಾಗಿಯಾಗಿದ್ದವು.

ನಗರದ ಸಿಟಿಬಸ್ ನಿಲ್ದಾಣ ಸಮೀಪದ ರಸ್ತೆ ಹಾಗೂ ಉಡುಪಿ ಜಾಮಿಯ ಮಸೀದಿಯ ರಸ್ತೆಗಳ ಇಕ್ಕೆಲಗಳಲ್ಲಿರುವ ಅಂಗಡಿಮುಗ್ಗಟ್ಟು, ಹೊಟೇಲುಗಳು ಬಂದ್ ಆಗಿದ್ದವು. ಉಳಿದಂತೆ ನಗರದ ಇತರ ರಸ್ತೆಗಳಲ್ಲಿ ಅಂಗಡಿಗಳು ತೆರೆದಿವೆ. ಬಂದ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿದೆ.

ಈ ಬಂದ್‌ಗೆ ಜಿಲ್ಲೆಯ 20ಕ್ಕೂ ಅಧಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಕುಂದಾಪುರ ಹಾಗೂ ಬೈಂದೂರಿನಲ್ಲಿ ಎಡಪಕ್ಷಗಳು ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಬಂದ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎರಡು ಕೆಎಸ್‌ಆರ್‌ಪಿ, ಆರು ಜಿಲ್ಲಾ ಸಶಸ್ತ್ರ ಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News