​ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ ಸಾಬೀತು : ಆರೋಪಿಗೆ ಕಠಿಣ ಶಿಕ್ಷೆ

Update: 2020-09-28 11:53 GMT

ಮಂಗಳೂರು, ಸೆ. 28: ನಗರ ಹೊರವಲಯದ ಹಾಸ್ಟೆಲ್‌ವೊಂದಕ್ಕೆ ನುಗ್ಗಿ ಎಂಬಿಬಿಎಸ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಹಣ ಸುಲಿಗೆ ಮಾಡಿದ ಆರೋಪವು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಸೋಮವಾರ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.

ಮೈಸೂರು ಕೆ.ಆರ್.ನಗರದ ನಾಗೇಶ ಆಲಿಯಾಸ್ ನಾಗು (30) ಶಿಕ್ಷೆಗೊಳಗಾದ ಅಪರಾಧಿ. ನ್ಯಾಯಾಧೀಶೆ ಸೈದುನ್ನೀಸಾ ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಸಂತ್ರಸ್ತೆಯ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಯರಾಮ ಶೆಟ್ಟಿ ವಾದಿಸಿದ್ದಾರೆ.

ಘಟನೆಯ ವಿವರ: 2017ರ ಡಿ.5ರಂದು ಮುಂಜಾನೆ 4:30 ಗಂಟೆಗೆ ನಾಗೇಶನು ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡದ ಛಾವಣಿಯೇರಿ ಅಲ್ಲಿಂದ 2ನೇ ಮಹಡಿಗೆ ಇಳಿದು ಅಲ್ಲಿ ಮಲಗಿದ್ದ ವಿದ್ಯಾರ್ಥಿನಿಯ ಕೋಣೆ ಪ್ರವೇಶಿಸಿದ್ದ. ಅಲ್ಲದೆ ಆಕೆಯ ಕೈ ಕಾಲುಗಳನ್ನು ಕಟ್ಟಿ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕಿ ಎಟಿಎಂ ಕಾರ್ಡ್ ಹಾಗೂ ಪರ್ಸ್ ದೋಚಿ ಪರಾರಿಯಾಗಿದ್ದ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶಿಕ್ಷೆಗೊಳಗಾಗಿರುವ ನಾಗೇಶ ಮಂಗಳೂರಿನ ವಿವಿಧೆಡೆ ಹೊಟೇಲ್, ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದ. ಹಾಗೇ ಉಳ್ಳಾಲ ಠಾಣಾ ವ್ಯಾಪ್ತಿಯ ಹಾಸ್ಟೆಲ್‌ವೊಂದಕ್ಕೆ ನುಗ್ಗಿ ಅಲ್ಲಿ ಕಳ್ಳತನ ಮಾಡಲು ತಂತ್ರ ರೂಪಿಸಿದ್ದ. ಹಾಗೇ ಹಾಸ್ಟೆಲ್‌ನ ವಿದ್ಯುತ್ ದೀಪಗಳನ್ನು ಆರಿಸುವವರೆಗೆ ಕಾದು ನಿಂತು ಬಳಿಕ ಕಟ್ಟಡದ ಪೈಪ್ ಮತ್ತು ತನ್ನ ಬಳಿ ಇದ್ದ ಹಗ್ಗವನ್ನು ಬಳಸಿ ಛಾವಣಿ ಏರಿ 2ನೇ ಮಹಡಿಗೆ ತೆರಳಿ ಸಣ್ಣ ಕಿಂಡಿಯಾಕಾರದ ಸ್ಥಳದ ಮುಖಾಂತರ ವಿದ್ಯಾರ್ಥಿನಿಯ ಕೋಣೆ ಪ್ರವೇಶಿಸಿದ್ದ. ವಿದ್ಯಾರ್ಥಿನಿಯ ಬಾಯಿ ಮುಚ್ಚಿ ಕೈ, ಕಾಲು ಕಟ್ಟಿ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೆ ರಾಡ್ ತೋರಿಸಿ ಬೆದರಿಕೆಯೊಡ್ಡಿ ಆಕೆಯ ಎಟಿಎಂ ಕಾರ್ಡ್, ಪರ್ಸ್ ಪಡೆದು ಪರಾರಿಯಾಗಿದ್ದ. ಅಷ್ಟರಲ್ಲಿ ಆಕೆ ಬೊಬ್ಬೆ ಹಾಕಿದಾಗ ಇತರ ಕೊಠಡಿಗಳಲ್ಲಿದ್ದ ವಿದ್ಯಾರ್ಥಿನಿಯರು ಓಡಿ ಬಂದಿದ್ದರು. ಆತ ದೋಚಿದ್ದ ಪರ್ಸ್‌ನಲ್ಲಿ 3,000 ರೂ. ಇತ್ತು. ಎಟಿಎಂನಿಂದ 8,000 ರೂ. ವಿತ್‌ಡ್ರಾ ಮಾಡಿದ್ದ. ಅಲ್ಲದೆ 3ನೇ ಮಹಡಿಯಲ್ಲಿ ಮಲಗಿದ್ದ ವಿದ್ಯಾರ್ಥಿನಿಯೊಬ್ಬಳ ಮೊಬೈಲ್ ಕೂಡ ಎಗರಿಸಿದ್ದ.

ಅಕ್ರಮ ಪ್ರವೇಶ ಮಾಡಿರುವುದಕ್ಕೆ 7 ವರ್ಷಗಳ ಕಠಿನ ಶಿಕ್ಷೆ ಮತ್ತು 10,000 ರೂ. ದಂಡ, ದಂಡ ಪಾವತಿಗೆ ತಪ್ಪಿದರೆ ಮತ್ತೆ 1 ವರ್ಷ ಸಾದಾ ಶಿಕ್ಷೆ, ಸುಲಿಗೆಗೆ 5 ವರ್ಷ ಕಠಿನ ಸಜೆ, 5,000 ರೂ. ದಂಡ, ದಂಡ ಪಾವತಿಗೆ ತಪ್ಪಿದರೆ ಹೆಚ್ಚುವರಿ 1 ವರ್ಷ ಸಾದಾ ಶಿಕ್ಷೆ, ರಾಡ್ ಹಿಡಿದು ಬೆದರಿಕೆ ಹಾಕಿರುವುದಕ್ಕೆ 7 ವರ್ಷಗಳ ಕಠಿನ ಶಿಕ್ಷೆ, 10,000 ರೂ.ದಂಡ, ದಂಡ ಪಾವತಿಗೆ ತಪ್ಪಿದರೆ ಮತ್ತೆ 1 ವರ್ಷ ಸಾದಾ ಸಜೆ, ಲೈಂಗಿಕ ದೌರ್ಜನ್ಯ ನಡೆಸಿರುವುದಕ್ಕೆ 5 ವರ್ಷ ಕಠಿನ ಸಜೆ, 5,000 ರೂ. ದಂಡ, ದಂಡ ಪಾವತಿಗೆ ತಪ್ಪಿದರೆ ಮತ್ತೆ 1 ವರ್ಷ ಸಾದಾ ಶಿಕ್ಷೆ ವಿಧಿಸಿ ನ್ಯಾಯಾಧೀಶೆ ತೀರ್ಪು ನೀಡಿದ್ದಾರೆ. ಈ ಶಿಕ್ಷೆಗಳನ್ನು ಏಕಕಾಲಕ್ಕೆ ವಿಧಿಸಲಾಗುತ್ತದೆ.

ಕಟ್ಟಡದಲ್ಲಿದ್ದ ಆರೋಪಿಯ ಬೆರಳಚ್ಚು ಹಾಗೂ ನಗರದ ಎರಡು ಎಟಿಎಂಗಳಲ್ಲಿ ಆತ ಹಣ ಪಡೆಯಲು ಹೋಗಿದ್ದಾಗ ಅಲ್ಲಿನ ಸಿಸಿ ಟಿವಿಗಳಲ್ಲಿ ದಾಖಲಾಗಿದ್ದ ದೃಶ್ಯಗಳು ತನಿಖೆಗೆ ಸಹಕಾರಿಯಾಗಿವೆ.

2017ರ ಡಿ.10ರಂದು ಆರೋಪಿಯನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 25 ಮಂದಿ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು. ಉಳ್ಳಾಲ ವೃತ್ತ ನಿರೀಕ್ಷಕ ಗೋಪಿಕೃಷ್ಣ ತನಿಖಾಧಿಕಾರಿಯಾಗಿದ್ದರು. ಅನಂತರ ಡಿಸಿಪಿ ಉಮಾ ಪ್ರಶಾಂತ್ ಹೆಚ್ಚಿನ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News