ರಾಷ್ಟ್ರೀಯ ಶಿಕ್ಷಣ ನೀತಿ ಕೈ ಬಿಡಲು ಸಮನ್ವಯ ವೇದಿಕೆ ಆಗ್ರಹ

Update: 2020-09-28 11:57 GMT

ಮಂಗಳೂರು, ಸೆ.28: ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮ ಕುರಿತಂತೆ ಚರ್ಚಿಸಲು ರಾಜ್ಯಮಟ್ಟದ ಸಮಾಲೋಚನಾ ಸಭೆಯು ಇತ್ತೀಚೆಗೆ ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ವತಿಯಿಂದ ಧಾರವಾಡದಲ್ಲಿ ಜರುಗಿತು.

ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಸಭೆಯನ್ನು ಉದ್ಘಾಟಿಸಿದರು. ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್‌ನ ಉಪಾಧ್ಯಕ್ಷ ಬಸವರಾಜ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿಸಿಎಫ್ ಇದರ ಮಹಾ ಪೋಷಕ ಡಾ.ನಿರಂಜನಾ ರಾಧ್ಯಾ ವಿ.ಪಿ. ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕುರಿತು ವಿಷಯ ಮಂಡಿಸಿದರು. ವೇದಿಕೆಯ ಪದಾಧಿಕಾರಗಳಾದ ರತ್ನಾ ಕವಲಗೇರಿ, ಎಸ್.ಎಫ್. ಸಿದ್ಧನಗೌಡ ಹಾಗು ಮೊಯ್ಯುದ್ದಿನ್ ಕುಟ್ಟಿ ಪ್ರತಿಕ್ರಿಯೆ ನೀಡಿದರು. ವಿಸ್ತೃತ ಚರ್ಚೆಯ ನಂತರ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ರಾಷ್ಟ್ರೀಯ ಶಿಕ್ಷಣ ನೀತಿಯು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಯಾವುದೇ ನಿರ್ಧಿಷ್ಟ ಪ್ರಸ್ತಾವನೆ ಅಥವಾ ಬದ್ಧತೆಯನ್ನು ಹೊಂದಿಲ್ಲದ ಕಾರಣ ನೀತಿಯನ್ನು ತಿರಸ್ಕರಿಸಬೇಕು. ಈ ನೀತಿಯು ಸಂವಿಧಾನವು ಕೊಡಮಾಡಿದ ಮೂಲಭೂತ ಹಕ್ಕನ್ನು ದುರ್ಬಲಗೊಳಿಸಿ ಆರ್‌ಟಿಇ ಕಾಯ್ದೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಆರ್‌ಟಿಇ ಕಾಯ್ದೆಯನ್ನು ಸಮಗ್ರವಾಗಿ ಜಾರಿಗೆ ತರಲು ಯಾವುದೇ ರೀತಿಯ ನೀಲಿ ನಕಾಶೆ ನೀಡುವಲ್ಲಿ ಶಿಕ್ಷಣ ನೀತಿ ಪೂರ್ಣವಾಗಿ ವಿಫಲವಾಗಿದೆ. ರಾಜ್ಯದ ಪೂರ್ಣ ಅನುದಾನದಲ್ಲಿ ಸಾರ್ವಜನಿಕ ವ್ಯವಸ್ಥೆಯ ಮೂಲಕ ಆರೈಕೆ, ರಕ್ಷಣೆ, ಪೋಷಣೆ ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಯಾವುದೇ ಖಾತರಿ ನೀಡಲು ಶಿಕ್ಷಣ ನೀತಿ ಸೋತಿದೆ. ಬದಲಿಗೆ ಸಾರ್ವಜನಿಕ ಶಿಕ್ಷಣವನ್ನು ಮತ್ತಷ್ಟು ದುರ್ಬಲಗೊಳಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ/ ವಿಲೀನಗೊಳಿಸುವ ಪ್ರಕ್ರಿಯೆಗೆ ಅನುಕೂಲವಾಗುವ ಮೂಲಕ ಶಿಕ್ಷಣದ ಕೇಂದ್ರೀಕರಣ, ಖಾಸಗೀಕರಣಕ್ಕೆ ಒತ್ತು ನೀಡಿದೆ. ಹುಟ್ಟಿನಿಂದ 18 ವರ್ಷದ ಎಲ್ಲಾ ಮಕ್ಕಳಿಗೆ ಮೂಲಭೂತ ಹಕ್ಕನ್ನು ವಿಸ್ತರಿಸಲು ಸಂವಿಧಾನದ 21 ಎ ವಿಧಿಗೆ ಅಗತ್ಯ ತಿದ್ದುಪಡಿ ಮಾಡಲು ನೀತಿ ಯಾವುದೇ ಪ್ರಸ್ತಾವನೆ ಹೊಂದಿಲ್ಲ ಎಂದು ಸಭೆ ಅಭಿಪ್ರಾಯಪಟ್ಟಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News