ಪುತ್ತೂರು: ಕೇಂದ್ರ, ರಾಜ್ಯ ಸರ್ಕಾರಗಳ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

Update: 2020-09-28 12:14 GMT

ಪುತ್ತೂರು: ಕೊರೋನದಿಂದಾಗಿ ದೇಶವೇ ಕಂಗೆಟ್ಟಿರುವ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಪ್ರಜಾಪ್ರಭುತ್ವ ವಿರೋಧಿ ಸುಗ್ರೀವಾಜ್ಞೆ ಜಾರಿಗೊಳಿಸುವ ಮೂಲಕ ಅನ್ನದಾತ ರೈತರಿಗೆ ಅನ್ಯಾಯ ಎಸಗಿದೆ. ದೇಶದಲ್ಲಿ ಪ್ರಧಾನಿ ಮೋದಿ ಹಾಗೂ ರಾಜ್ಯದಲ್ಲಿ ಯುಡಿಯೂರಪ್ಪ ಅವರಿಂದ ಹಿಟ್ಲರ್ ಆಡಳಿತ ನಡೆಯುತ್ತಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಆರೋಪಿಸಿದರು.

ಅವರು ಭೂಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಸೋಮವಾರ ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳ ಸಹಭಾಗಿತ್ವದಲ್ಲಿ ಪುತ್ತೂರಿನ ಬಸ್ಸುನಿಲ್ದಾಣದ ಸಮೀಪದ ಗಾಂಧೀ ಕಟ್ಟೆಯ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ರೈತರ ಅನ್ನದ ಬಟ್ಟಲಿಗೆ ವಿಷ ಹಾಕುತ್ತಿರುವ ಹಿಟ್ಲರ್ ಆಡಳಿತದ ಮೋದಿ ಮತ್ತು ಯಡಿಯೂರಪ್ಪ ಅವರನ್ನು ಇಲ್ಲಿನ ಅನ್ನದಾತರಾದ ರೈತರು ಆದಷ್ಟು ಬೇಗ ಕಿಕ್‍ಔಟ್ ಮಾಡಲಿದ್ದಾರೆ ಎಂದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿದರು. ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಪುತ್ತೂರು ಬ್ಲಾಕ್ ಕಾಂಗ್ರೇಸ್, ಜೆಡಿಎಸ್, ಎಸ್‍ಡಿಪಿಐ, ಅಂಬೇಡ್ಕರ್ ಅಪತ್ಮಾಂಧವ ಟ್ರಸ್ಟ್, ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಬಿಜೆಪಿ ಮುಖಂಡ ಕೇಶವ ಸುವರ್ಣ, ಹಸಿರುಸೇನೆ ಮುಖಂಡರಾದ ವಿಕ್ಟರ್ ಕಡಬ, ಹೊನ್ನಪ್ಪ ಗೌಡ, ಸುಬ್ರಹ್ಮಣ್ಯ ಭಟ್, ಎಸ್‍ಡಿಪಿಐ ಮುಖಂಡ ಸಿದ್ದೀಕ್, ಅಂಬೇಡ್ಕರ್ ಆಪತ್ಮಾಂಧವ ಟ್ರಸ್ಟ್ ನ ಮುಖಂಡರಾದ ರಾಜು ಹೊಸ್ಮಠ, ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಮುಖಂಡ ಗಿರಿಧರ್ ನಾಯ್ಕ್, ರೈತ ಸಂಘ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಮತ್ತಿತರರು ಭಾಗವಹಿಸಿದ್ದರು.

ಪುತ್ತೂರು ಬಸ್‍ನಿಲ್ದಾಣದ ಮೂರು ರಸ್ತೆಗಳಿಗೆ ಪ್ರತಿಭಟನಾಕಾರರು ಸುಮಾರು 1ಗಂಟೆಗೂ ಹೆಚ್ಚು ಕಾಲ ತಡೆ ಒಡ್ಡಿದರು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಪ್ರತಿಭಟನೆಯಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಎಸ್ಪಿ ಲಖನ್ ಯಾದವ್ ಸಿಂಗ್ ನೇತೃತ್ವ ದಲ್ಲಿ ಪೊಲೀಸರು ಬಂದೋಬಸ್ತು ವ್ಯವಸ್ಥೆ ಮಾಡಿದ್ದರು.

ರಾಜ್ಯ ರೈತಸಂಘ ಹಸಿರುಸೇನೆ ಹಾಗೂ ವಿವಿಧ ಸಂಘಟನೆಗಳು ನೀಡಿದ ರಾಜ್ಯ ಬಂದ್ ಕರೆಗೆ ಪುತ್ತೂರು ತಾಲೂಕಿನಲ್ಲಿ ಯಾವುದೇ ಸ್ಪಂಧನೆ ಕಂಡುಬರಲಿಲ್ಲ. ಜನಜೀವನ ಎಂದಿನಂತೆ ಸುವ್ಯವಸ್ಥಿತವಾಗಿತ್ತು. ವಾಹನಗಳ ಓಡಾಟ, ಸರ್ಕಾರಿ ಬಸ್ ಗಳ ವ್ಯವಸ್ಥೆ ಕಂಡುಬಂತು. ಅಂಗಡಿ ಮುಗ್ಗಟುಗಳು ತೆರೆದಿದ್ದವು. ಗ್ರಾಮೀಣ ಭಾಗಳಿಂದ ಹಿಡಿದು ಪುತ್ತೂರು ನಗರದ ತನಕ ಯಾವುದೇ ಅಂಗಡಿಗಳು ಬಂದ್ ಆಗಿರಲಿಲ್ಲ. 

ಪ್ರತಿಕೃತಿಗಳು ಪೊಲೀಸರ ವಶಕ್ಕೆ

ಪ್ರತಿಭಟನೆ ಬಳಿಕ ಮಿನಿವಿಧಾನ ಸೌಧಕ್ಕೆ ಶವಯಾತ್ರೆ ಮೂಲಕ ಬಂದ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಅವರಿಗೆ ಮನವಿ ನೀಡಿ ದರು. ಈ ನಡುವೆ ಎಂಟಿ ರಸ್ತೆಯಲ್ಲಿ ಪ್ರಕೃತಿಗಳ ಬಾಯಿಗೆ ನೀರು ಕುಡಿಸುವ ಕಾರ್ಯವನ್ನೂ ನಡೆಸಲಾಯಿತು. ಮೋದಿ ಹಾಗೂ ಯಡಿಯೂರಪ್ಪ ಅವರ ಪ್ರತಿಕೃತಿ ದಹನಕ್ಕೆ ಪೊಲೀಸರು ಅನುಮತಿ ನಿರಾಕರಿಸಿದರು. ನಂತರ ಪೊಲೀಸರು ಪ್ರತಿಕೃತಿಗಳನ್ನು ವಶಕ್ಕೆ ಪಡೆದುಕೊಂಡು ಪೊಲೀಸ್ ವಾಹನದ ಮೂಲಕ ಸಾಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News